ಮರಾಟಿ, ಮರಾಠ ನಮೂದಿಸಲು ವಿನಂತಿ
ಮಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಮರಾಟಿ ಸಮುದಾಯ ಜಾತಿ ಕಾಲಂನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಾಟಿ (ಸಿ36) ಎಂದು, ಕೊಡಗು ಜಿಲ್ಲೆಯಲ್ಲಿ ಮರಾಠ (ಸಿ 35) ಎಂದು ನಮೂದಿಸಬೇಕೆಂದು ಮಂಗಳೂರಿನ ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ ವಿನಂತಿಸಿದೆ.
ಧರ್ಮ ಕಾಲಂನಲ್ಲಿ ಹಿಂದು, ಉಪಜಾತಿ ಕಾಲಂನಲ್ಲಿ ಅನ್ವಯಿಸುವುದಿಲ್ಲ (ಇಲ್ಲ), ಮಾತೃಭಾಷೆ ಇತರ- ಮರಾಟಿ, ಕುಲಕಸುಬು - ಕುಮೇರಿ ಕೃಷಿ, ನಿಮ್ಮ ಕುಲ ಕಸುಬು ಮುಂದುವರೆದಿದೆಯೇ ಎಂಬ ಕಾಲಂನಲ್ಲಿ ಭಾಗಶಃ ಮುಂದುವರೆದಿದೆ ಎಂಬ ಮಾಹಿತಿ ಒದಗಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ಡಾ.ಕೆ. ಸುಂದರ ನಾಯ್ಕ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿನಂತಿಸಿದರು.
ರಾಜ್ಯದಲ್ಲಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ (ತೀರ್ಥಹಳ್ಳಿ), ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡಿರುವ ಮರಾಟಿಗರನ್ನು ‘ಮರಾಟಿ’ ಎಂದೂ, ಕೊಡಗು ಜಿಲ್ಲೆಯ ಮರಾಟಿ ಸಮುದಾಯದವರನ್ನು ‘ಮರಾಠ’ ಎಂದು ಕೇಂದ್ರ ಮತ್ತು ರಾಜ್ಯ ಸರಕಾರ ಪರಿಗಣಿಸಿದೆ. ಒಟ್ಟು 3-4 ಲಕ್ಷ ಜನಸಂಖ್ಯೆಯಿದೆ. ಈ ಜಿಲ್ಲೆಗಳ ಹೊರತಾಗಿ ಮರಾಟಿಗರನ್ನು ಪರಿಶಿಷ್ಟ ಪಂಗಡ ಎಂದು ಪರಿಗಣಿಸಿಲ್ಲ ಎಂದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಮಂಜಸವಾಗಿದ್ದು, ಹಿಂದುಳಿದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು, ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಎಲ್ಲರೂ ಸಮರ್ಪಕ ಮಾಹಿತಿ ಒದಗಿಸಬೇಕು ಎಂದರು.
ಒಕ್ಕೂಟ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರು, ಪ್ರಧಾನ ಕಾರ್ಯದರ್ಶಿ ವಾಸು ನಾಯ್ಕ್, ಜಂಟಿ ಕಾರ್ಯದರ್ಶಿ ಪ್ರಕಾಶ್, ಮಂಗಳೂರು ಅಧ್ಯಕ್ಷ ವಿಶ್ವನಾಥ ನಾಯ್ಕ್, ಸದಸ್ಯರಾದ ಬಿ. ರಾಮ ನಾಯ್ಕ್, ಶಿವಪ್ಪ ನಾಯ್ಕ್ ಉಪಸ್ಥಿತರಿದ್ದರು.