ಅಮೇವು ಶ್ರೀ ಆದಿಶಕ್ತಿ ದೇವಿ ದೇವಸ್ಥಾನದ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಪ್ರಯುಕ್ತ ಹೊರೆ ಕಾಣಿಕೆ: ಭಾವೈಕ್ಯತೆ ಮೆರೆದ ಮುಸ್ಲಿಂ ಸಮುದಾಯ
Tuesday, September 23, 2025
ಮಂಗಳೂರು: ಬಜಾಲ್ ನಂತೂರಿನ ಅಮೇವು ಶ್ರೀ ಆದಿಶಕ್ತಿ ದೇವಿ ದೇವಸ್ಥಾನದ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಪ್ರಯುಕ್ತ ಸೆ.23 ರ ಮಂಗಳವಾರ ಸಂಜೆ ಇಲ್ಲಿ ನಡೆದ ಹೊರೆ ಕಾಣಿಕೆ ಮೆರವಣಿಗೆಯನ್ನು ಮುಸ್ಲಿಂ ಬಾಂಧವರು ಸ್ವಾಗತಿಸಿ ಭಾವೈಕ್ಯತೆ ಮೆರದಿದ್ದಾರೆ.
ಶ್ರೀ ಕ್ಷೇತ್ರಕ್ಕೆ ದೇವಸ್ಥಾನದ ಮುಖ್ಯಸ್ಥ ವಿಠಲ್ ಪೂಜಾರಿ ನೇತೃತ್ವದ ಹೊರೆ ಕಾಣಿಕೆ ಮೆರವಣಿಗೆ ಬಜಾಲ್ ನಂತೂರಿನ ಬದ್ರಿಯಾ ಜುಮಾ ಮಸೀದಿ ಎದುರಾಗಿ ಸಾಗುತ್ತಿದ್ದ ವೇಳೆ ಜಮಾಅತ್ ಆಡಳಿತ ಕಮಿಟಿ ಮುಖಂಡರು ಭಕ್ತಾದಿಗಳನ್ನು ಸ್ವಾಗತಿಸಿ, ಸಿಹಿ ತಿಂಡಿ, ತಂಪು ಪಾನೀಯ, ಐಸ್ ಕ್ರೀಮ್ ವಿತರಿಸಿ ಸೌಹಾರ್ದತೆ ಸಾರಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಬ್ರಹ್ಮ ಭೈದರ್ಕಳ ಕ್ಷೇತ್ರ ಕಂಕನಾಡಿ ಗರೋಡಿಯ ಅಧ್ಯಕ್ಷ ಕೆ. ಚಿತ್ತರಂಜನ್, ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರವೂಫ್, ಉಪಾಧ್ಯಕ್ಷರುಗಳಾದ ಅಶ್ರಫ್ ಬಜಾಲ್, ಎಚ್.ಎಸ್. ಹನೀಫ್, ನಝೀರ್ ಬಜಾಲ್, ಆಮೇವು ಕ್ಷೇತ್ರ ಆದಿ ಶಕ್ತಿ ದೇವಿ ದೇವಸ್ಥಾನದ ಮುಖ್ಯಸ್ಥರು ವಿಠಲ್ ಪೂಜಾರಿ, ಬರತೇಶ್ ಅಮೀನ್, ಹರಿಪ್ರಸಾದ್, ಹೇಮಂತ್ ಗರೋಡಿ, ನಝೀರ್ ಬಜಾಲ್, ಅಬೂಬಕ್ಕರ್, ಅಬ್ದುಲ್ ರಝಕ್, ಎಂ ಆರ್ ರಫೀಕ್, ಸೌಕಾತ್ ಇಬ್ರಾಹಿಂ, ಯೋಗೀಶ್ ಅತ್ತಾವರ, ಮಾಧವ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.



