ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
Tuesday, September 23, 2025
ಮಂಗಳೂರು: ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಎರಡು ದಿನಗಳ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಇಂದು ಮಂಗಳೂರಿನ ಶಕ್ತಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ. ಕೆ.ಸಿ. ನಾಕ್ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಕಲಿಕೆಯ ಜೊತೆಗೆ ಕ್ರೀಡೆಗೆ ನಾವೆಲ್ಲರು ಪ್ರೋತ್ಸಾಹವನ್ನು ನೀಡಬೇಕು. ನೀವು ಭಾರತದ ಮುಂದಿನ ಶಕ್ತಿ. ರಜೆಯಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವುದು ನೋಡಿದರೆ ನಿಮಗೆ ಕ್ರೀಡೆಯಲ್ಲಿರುವ ಆಸಕ್ತಿಯನ್ನು ಇದು ತೋರಿಸುತ್ತದೆ ಎಂದು ಹೇಳಿದರು.
ಈ ಕ್ರೀಡೆಯಲ್ಲಿ ಎಲ್ಲರೂ ಗೆಲುವು ಸಾಧಿಸಲು ಸಾಧ್ಯವಿಲ್ಲ ಆದರೆ ಕೆಲವರು ಗೆಲುವು ಸಾಧಿಸುತ್ತಾರೆ. ಸೋತವರು ಮುಂದಿನ ದಿನಗಳಲ್ಲಿ ಗೆಲುವು ಸಾಧಿಸುತ್ತೇನೆಂಬ ಭರವಸೆಯಿಂದ ಪ್ರಯತ್ನವನ್ನು ಮುಂದುವರಿಸಬೇಕೆಂದು ಹೇಳಿದರು.
ಮುಖ್ಯ ಅತಿಥಿ ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಅವರು ಧ್ವಜ ವಂದನೆಯನ್ನು ಸ್ವೀಕರಿಸಿ, ನಂತರ ಕ್ರಿಡಾಪಟುಗಳಿಗೆ ಶುಭ ಹಾರೈಸಿದರು.
ವಿದ್ಯಾಭಾರತಿ ಕರ್ನಾಟಕದ ಪ್ರಾಂತ ಉಪಾಧ್ಯಕ್ಷ ವಸಂತಮಾಧವ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾ ಪಟುಗಳು ಜಿಲ್ಲೆಯಿಂದ ರಾಜ್ಯಮಟ್ಟ ಕ್ಷೇತ್ರ, ರಾಷ್ಟ್ರಮಟ್ಟ ಹಾಗೂ ಎಸ್‌ಜಿಎಫ್‌ಐಗೆ ಆಯ್ಕೆಯಾಗುವ ಅವಕಾಶವನ್ನು ವಿದ್ಯಾಭಾರತಿ ಕಲ್ಪಿಸಿಕೊಟ್ಟಿದೆ. ಈ ಕ್ರೀಡಾಕೂಟದಲ್ಲಿ ನಾವು ಪ್ರಾಮಾಣಿಕ ಮತ್ತು ಶ್ರದ್ದೆಯಿಂದ ಪಾಲ್ಗೊಳ್ಳಬೇಕೆಂದು ಹೇಳಿ ಶುಭ ಹಾರೈಸಿದರು.
ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸುಮಾರು 35 ಶಾಲೆಗಳ ಕ್ರೀಡಾ ಪಟುಗಳು ಆಕರ್ಷಕ ಪಥ ಸಂಚಲನ ನಡೆಸಿದರು. ರಾಜ್ಯ ಉಪಾಧ್ಯಕ್ಷ ವಸಂತ ಮಾಧವ ಧ್ವಜಾರೋಹಣ ನಡೆಸಿದರು. ನಂತರ ದಕ್ಷಿಣ ಕನ್ನಡ ಜಿಲ್ಲೆಯನ್ನು ಎಸ್‌ಜಿಎಪ್‌ಐನಲ್ಲಿ ಪ್ರತಿನಿಧಿಸಿದ ಕ್ರೀಡಾ ಪಟುಗಳು ಕ್ರೀಡಾ ಜ್ಯೋತಿಯನ್ನು ಕಾರ್ಯಕ್ರಮದ ಉದ್ಘಾಟಕರಿಗೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ರಮೇಶ ಕೆ. ಸ್ವಾಗತಿಸಿದರು. ಜಿಲ್ಲಾ ಖೇಲ್ ಖೂದು ಪ್ರಮುಖರಾದ ಕರುಣಾಕರ ನಿರೂಪಿಸಿದರು.





