ಜಿಎಸ್‌ಟಿ ರಿಯಾಯಿತಿ: ನವರಾತ್ರಿ ಕೊಡುಗೆ
ಮಂಗಳೂರು: ದೇಶದ ಜನರಿಗೆ ನರೇಂದ್ರ ಮೋದಿಯವರ ಸರ್ಕಾರ ನವರಾತ್ರಿಗೆ ಬಂಪರ್ ಕೊಡುಗೆ ನೀಡಿದೆ. ಜಿ.ಎಸ್.ಟಿ. ವ್ಯವಸ್ಥೆಯಲ್ಲಿ ಸರಳೀಕರಣ ಮಾಡುವುದರ ಮೂಲಕ ಶೇ.12 ಮತ್ತು ಶೇ.28 ರ ಸ್ಲ್ಯಾಬ್‌ನ್ನು ರದ್ದು ಪಡಿಸಿ ಕೇವಲ ಶೇ.5 ಮತ್ತು ಶೇ.18ರ ಸ್ಲ್ಯಾಬ್‌ನ್ನು ಉಳಿಸಿದ್ದಾರೆ. ಈ ಮೂಲಕ ದಿನಬಳಕೆಯ ಮತ್ತು ಅಗತ್ಯ ವಸ್ತುಗಳ ಬೆಲೆಗಳು ಇಳಿಕೆಯಾಗಲಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಶ್ಲಾಘನೀಯ ಮತ್ತು ಈ ಸರ್ಕಾರ ಜನಪರ ಸರ್ಕಾರ ಎಂದು ನಿರೂಪಿಸಿದೆ ಎಂದು ದ. ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಆರೋಗ್ಯ, ಜೀವ, ವೈಯಕ್ತಿಕ ವಿಮೆಗಳು, ಕ್ಯಾನ್ಸರ್ ಚಿಕಿತ್ಸೆ ಮತ್ತು ವಿವಿಧ ಜೀವರಕ್ಷಕ ಔಷಧಿಗಳು ಮತ್ತು ಸ್ಟೇಶನರಿ ಸಾಮಾಗ್ರಿಗಳು ಶೂನ್ಯ ತೆರಿಗೆ ವ್ಯಾಪ್ತಿಯಲ್ಲಿರಲಿದೆ. ಕೇಂದ್ರ ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ವಿಶೇಷ ಮಹತ್ವ ನೀಡಿರುವುದು ಗಮನಾರ್ಹ, ಜತೆಯಲ್ಲಿ ಗೃಹ ನಿರ್ಮಾಣದ ವಸ್ತುಗಳ ತೆರಿಗೆಗಳು ಇಳಿಕೆಯಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ದಿನನಿತ್ಯ ಬೆಲೆಯೇರಿಕೆ ಮಾಡಿ ಜನಜೀವನ ಹೈರಾಣುಗೊಳಿಸಿದರೆ ಕೇಂದ್ರ ಸರ್ಕಾರ ಜನಹಿತವನ್ನು ಗುರಿಯಾಗಿಸಿ ಕಾರ್ಯ ನಿರ್ವಹಿಸುತ್ತಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.