ತಿಮರೋಡಿ ರಾಯಚೂರಿಗೆ ಬೇಡ ಕಾಡಿಗೆ ಕಳುಹಿಸಿ: ರಾಯಚೂರು ಜನತೆ ಆಕ್ರೋಶ
ಮಂಗಳೂರು: ಸೌಜನ್ಯ ಪರ ನ್ಯಾಯ ಹೋರಾಟದ ನಾಯಕ ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿಗೆ ಗಡಿಪಾರು ಮಾಡಿರುವ ಬೆನ್ನಲ್ಲೇ ರಾಯಚೂರಿನ ಜನ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತಿಮರೋಡಿ ಇಲ್ಲಿಗೆ ಬರೋದು ಬೇಡ, ಯಾವುದಾದರೂ ಕಾಡಿಗೆ ಕಳುಹಿಸಿ ಎಂದು ದಲಿತ ಸೇನೆ ಮತ್ತು ಸಮಾನ ಮನಸ್ಕರ ವೇದಿಕೆ ಆಗ್ರಹಿಸಿದೆ.
ರಾಯಚೂರು ದಲಿತಪರ ಸಂಘಟನೆ ಹಾಗೂ ಸಮಾನ ಮನಸ್ಕರ ವೇದಿಕೆ ವತಿಯಿಂದ ಇಂದು ರಾಯಚೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ‘ನಮ್ಮ ರಾಯಚೂರು ಜಿಲ್ಲೆಯಲ್ಲಿ ಗೂಂಡಾಗಳಿಗೆ ಜಾಗವಿಲ್ಲ. ಬೇಕಾದರೆ ಮಹೇಶ್ ತಿಮರೋಡಿಯನ್ನ ಕಾಡಿಗೆ ಕಳುಹಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರಿಗೆ ಯಾಕೆ...
ಸಾಮಾನ್ಯವಾಗಿ ಈ ರೀತಿ ಗಡೀಪಾರು ಮಾಡುವಾಗ ಪೊಲೀಸರು ವರದಿಯಲ್ಲಿ ನಾಲ್ಕು ಜಿಲ್ಲೆಗಳನ್ನು ಸೂಚಿಸಿರುತ್ತಾರೆ. ಮುಖ್ಯವಾಗಿ ಆ ಜಿಲ್ಲೆಯಲ್ಲಿ ಆರೋಪಿಗಳ ಇದುವರೆಗಿನ ಕೃತ್ಯಕ್ಕೆ ಪೂರಕವಾಗಿರುವ ಅಂಶಗಳು ಯಾವುದೂ ಇರಬಾರದು. ಅಲ್ಲಿ ಆತನ ಕೃತ್ಯ ಮುಂದುವರಿಯುವುದಕ್ಕೆ ಅವಕಾಶ ಇರಬಾರದು ಮತ್ತು ಆ ಪ್ರದೇಶ ಸಾಕಷ್ಟು ದೂರದಲ್ಲಿರಬೇಕು. ಬೆಳ್ತಂಗಡಿಯಿಂದ ರಾಯಚೂರಿಗೆ ಸುಮಾರು 532 ಕಿ.ಮೀ. ದೂರವಿದ್ದು, ಒಂದು ದಿನದಲ್ಲಿ ಬೆಳ್ತಂಗಡಿಗೆ ಬಂದು ಹೋಗುವುದು ಅಸಾಧ್ಯ. ಹಾಗಾಗಿ ರಾಯಚೂರಿಗೆ ಗಡೀಪಾರು ಮಾಡಲಾಗಿದೆ ಎನ್ನಲಾಗಿದೆ.
ಅಸಂವಿಧಾನಿಕ ಪದ ಮುಳುವಾಯಿತೇ..
ಮಹೇಶ್ ಶೆಟ್ಟಿ ತಿಮರೋಡಿ ಸಾರ್ವಜನಿಕ ಸಭೆಗಳಲ್ಲಿ ಅಸಂವಿಧಾನಿಕ ಪದ ಬಳಕೆ ಮಾಡಿರುವುದೇ ಮುಳುವಾಯಿತೇ? ಎಂಬ ಪ್ರಶ್ನೆ ಮೂಡಿದೆ. ತಿಮರೋಡಿ ಸೌಜನ್ಯ ಪರ ಹೋರಾಟದ ವೇಳೆ ಸಾರ್ವಜನಿಕ ಸಭೆಗಳಲ್ಲಿ ರಾಜಕೀಯ ನಾಯಕರನ್ನು ಕೀಳಾಗಿ ನಿಂದಿಸುತ್ತಿದ್ದರು. ಅಲ್ಲದೆ ಧರ್ಮಸ್ಥಳ ಕ್ಷೇತ್ರವನ್ನೂ ನಿಂದಿಸುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ತಿಮರೋಡಿ ಅಸಂವಿಧಾನಿಕ ಪದ ಬಳಕೆ ವಿರುದ್ಧ ಕ್ರಮಕ್ಕೆ ಸೂಚಿಸಿತ್ತು. ಸ್ವತಃ ಗೃಹ ಸಚಿವ ಡಾ.ಪರಮೇಶ್ವರ್ ಅವರು ತಿಮರೋಡಿ ಕೇಸ್ ಹಿಸ್ಟರಿ ಮೇಲೆ ಕಠಿಣ ಕ್ರಮಕೈಗೊಳ್ಳುವಂತೆ ದ.ಕ. ಜಿಲ್ಲಾ ಎಸ್ಪಿಗೆ ಸೂಚಿಸಿದ್ದರು.
ಪೊಲೀಸ್ ಅಧಿಕಾರಿಗಳು, ಸಮಾಜದ ಗಣ್ಯರು, ಸರ್ಕಾರ ನಡೆಸುತ್ತಿರುವ ಉನ್ನತ ಹುದ್ದೆಯ ರಾಜಕಾರಣಿಗಳಿಗೆ ಅಸಂವಿಧಾನಿಕ ಪದಗಳಿಂದ ತಿಮರೋಡಿ ತುಚ್ಚವಾಗಿ ನಿಂದಿಸುತ್ತಿದ್ದರು. ಇದೇ ಕಾರಣಕ್ಕೆ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ 32 ಕೇಸು ದಾಖಲಾಗಿದ್ದವು. ಆ ಕೇಸುಗಳೇ ತಿಮರೋಡಿಗೆ ಮುಳುವಾಗಿದೆ. ಈ ನೆಲದ ಕಾನೂನಿನ ಮೇಲೆ ಕಿಂಚಿತ್ತೂ ಭಯ ಹಾಗೂ ಗೌರವವಿಲ್ಲದೇ ತಿಮರೋಡಿಯ ಕ್ರಿಮಿನಲ್ ಚಟುವಟಿಕೆಯನ್ನು ಪುತ್ತೂರಿನ ಸಹಾಯಕ ಕಮಿಷನರ್ ಅವರು ಗಡೀಪಾರು ಅದೇಶದಲ್ಲಿ ಉಲ್ಲೇಖಿಸಿದ್ದಾರೆ.
ಆದೇಶ ಪಾಲಿಸದಿದ್ದಲ್ಲಿ ಬಂಧನ..
2025ರ ಸೆ.18 ರಿಂದ ಮುಂದಿನ ವರ್ಷದ ಸೆ. 17ರ ತನಕದ ಅವಧಿಗೆ ಗಡೀಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಗಡಿಪಾರು ಆದೇಶವನ್ನು ಪಾಲನೆ ಮಾಡದೇ ಇದ್ದಲ್ಲಿ, ಕೂಡಲೇ ಬಂಧಿಸಿ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಲು ಸೂಚನೆ ನೀಡಲಾಗಿದೆ. ಪೊಲೀಸರು ಅಥವಾ ನ್ಯಾಯಾಲಯ ನೋಟಿಸ್ ಜಾರಿ ಮಾಡಿದಾಗ ಮಾತ್ರ ಜಿಲ್ಲೆಯನ್ನು ಪ್ರವೇಶಿಸಲು ಅವಕಾಶ ನೀಡಲಾಗಿದೆ. ಗಡಿಪಾರು ಆದೇಶದಲ್ಲಿರುವ ಸಮಯದಲ್ಲಿ ಪ್ರತಿ 7 ದಿನಗಳಿಗೊಮ್ಮೆ ಮಾನ್ವಿ ಪೊಲೀಸ್ ಠಾಣೆಯ ಠಾಣಾಧಿಕಾರಿಯವರ ಮುಂದೆ ಹಾಜರಾಗಲು ಸೂಚನೆ ನೀಡಲಾಗಿದೆ. ಈ ಆದೇಶದ ವಿರುದ್ಧ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.
ನೋಟಿಸ್‌ಗೆ ಸಿದ್ಧತೆ
ಪುತ್ತೂರಿನ ಸಹಾಯಕ ಕಮಿಷನರ್ ಅವರು ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ತಿಮರೋಡಿಗೆ ಗಡೀಪಾರು ನೋಟಿಸ್ ನೀಡಲು
ಸಿದ್ಧತೆ ನಡೆಸಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿಯ ಮನೆಯಲ್ಲಿ ಇಲ್ಲದ ಕಾರಣ ಬೇರೆ ಕಡೆ ಪೊಲೀಸರು ತೆರಳಿದ್ದಾರೆ. ಬೆಂಗಳೂರು ಮತ್ತು ಚಿಕ್ಕಮಗಳೂರಿಗೆ ಪೊಲೀಸ್ ತಂಡ ತೆರಳಿದ್ದು, ಈ ಕಡೆಗಳಲ್ಲಿ ತಿಮರೋಡಿ ತಲೆಮರೆಸಿರುವ ಶಂಕೆ ವ್ಯಕ್ತವಾಗಿದೆ.
27ಕ್ಕೆ ವಿಚಾರಣೆ..
ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಬಂಧನ ಭೀತಿಯಲ್ಲಿ ತಲೆಮರೆಸಿರುವ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಮೂರನೇ ನೋಟಿಸ್ ಅಂಟಿಸಲು ಬೆಳ್ತಂಗಡಿ ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ಎರಡು ನೋಟಿಸ್ ಅಂಟಿಸಲಾಗಿತ್ತು.
ಸದ್ಯ ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ತಿಮರೋಡಿ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಸಹಾಯಕ ಅಭಿಯೋಜಕರಿಗೆ ಕೋರ್ಟ್ ಆಕ್ಷೇಪಣೆಗೆ ನೋಟಿಸ್
ಜಾರಿಗೊಳಿಸಿದೆ. ಅಲ್ಲದೆ ಸೆ.27ರಂದು ವಿಚಾರಣೆ ನಿಗದಿಪಡಿಸಿದೆ. ಹೀಗಾಗಿ ತಿಮರೋಡಿ ಅಲ್ಲಿವರೆಗೆ ವಿಚಾರಣೆಗೆ ಹಾಜರಾಗುವುದು ಅನುಮಾನ. ಆದ್ದರಿಂದ ಮೂರನೇ ನೋಟಿಸ್ ಜಾರಿಗೊಳಿಸುವ ಸಾಧ್ಯತೆ ಇದೆ.