ಡಿಜಿಟಲ್ ತಂತ್ರಜ್ಞಾನ ಬಳಕೆಯಿಂದ ವಂಚನೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಕಳವಳಕಾರಿ: ಡಾ. ತಿಪ್ಪೇಸ್ವಾಮಿ ಕೆ.ಟಿ.
ರತಿ ಫೌಂಡೇಶನ್, ಒಆರ್‌ಇಎಸ್‌ಪಿ, ಪಡಿ ಮಂಗಳೂರು ಮತ್ತು ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಭಾಗಿತ್ವದಲ್ಲಿ ಆನ್‌ಲೈನ್ ಸುರಕ್ಷತೆ ಮತ್ತು ಪ್ರತಿಕ್ರಿಯಾ ತಂತ್ರಗಳ ಕುರಿತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಂಚೂಣಿ ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಕಾರ್ಯಕರ್ತರಿಗಾಗಿ ನಗರದ ಹೊಟೇಲ್ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಬುಧವಾರ ನಡೆದ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಆನ್‌ಲೈನ್ ಶಿಕ್ಷಣದಿಂದಾಗಿ ಮಕ್ಕಳನ್ನು ಇಂದು ಮೊಬೈಲ್‌ನಿಂದ ದೂರವಿಡುವುದು ಸಾಧ್ಯವಿಲ್ಲ. ಆದರೆ, ಮಕ್ಕಳ ಮೇಲೆ ನಡೆಯುತ್ತಿರುವ ಆನ್‌ಲೈನ್ ವಂಚನೆ ಹಾಗೂ ಲೈಂಗಿಕ ದೌರ್ಜನ್ಯ ಗಂಭೀರ ವಿಚಾರ. ಕಳೆದ 10 ತಿಂಗಳಿನಲ್ಲಿ ರಾಜ್ಯದಲ್ಲಿ 26463 ಮಂದಿ ಹದಿಹರೆಯದ ಮಕ್ಕಳು ಗರ್ಭಿಣಿಯರಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ 14 ಸಾವಿರ ಮಕ್ಕಳು ನಾಪತ್ತೆಯಾಗಿದ್ದು, 13 ಸಾವಿರ ಮಕ್ಕಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಶೇ.42ರಷ್ಟು ಮಕ್ಕಳು ದೃಷ್ಟಿದೋಷ ಹೊಂದಿದ್ದಾರೆ. ಮಕ್ಕಳಲ್ಲಿ ಬೆನ್ನುನೋವು, ಕತ್ತು ನೋವು ಹೆಚ್ಚುತ್ತಿದೆ, ಮಕ್ಕಳಿಗೆ ಏಕಾಗ್ರತೆಯಿಂದ ಪಾಠ ಆಲಿಸಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಪ್ರಕರಣಗಳಿಗೆ ಮಕ್ಕಳು ಮೊಬೈಲ್ ಬಳಸುತ್ತಿರುವುದು ಪ್ರಮುಖ ಕಾರಣವಾಗಿದೆ ಎಂದರು.
ಮಕ್ಕಳು ಸಾಮಾಜಿಕ ಜಾಲತಾಣ ವೀಕ್ಷಿಸುವಾಗಲೇ ಅಶ್ಲೀಲತೆ, ಲೈಂಗಿಕತೆ ಪ್ರಚೋದಿಸುವ ದೃಶ್ಯಗಳು ಕಾಣಸಿಗುತ್ತವೆ. ಇನ್ನೊಂದೆಡೆ, ಮಕ್ಕಳ ಮೇಲೆ ಮನೆಯವರು, ಸಂಬಂಧಿಕರು, ಪರಿಚಿತರಿಂದಲೇ ಲೈಂಗಿಕ ಕಿರುಕುಳ ಪ್ರಕರಣ ವರದಿಯಾಗುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಮಕ್ಕಳ ಬಗ್ಗೆ ಪೋಷಕರ ನಿಗಾ ಹೆಚ್ಚಬೇಕು ಎಂದರು.
ತರಬೇತಿ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಽಶೆ ಹಾಗೂ ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ, ಕೊರೋನಾ ಕಾಲಘಟ್ಟದ ಬಳಿಕ ಆನ್‌ಲೈನ್ ಶಿಕ್ಷಣ ಮುನ್ನಲೆಗೆ ಬಂದ ನಂತರ ಮಕ್ಕಳು ಮೊಬೈಲ್ ಬಳಸುತ್ತಿರುವುದು ಅನಿವಾರ್ಯವಾಗಿದೆ. ಮಕ್ಕಳು ಮೊಬೈಲ್‌ನಲ್ಲಿ ಶೇ.10ರಷ್ಟು ಒಳ್ಳೆಯ ವಿಚಾರಗಳನ್ನು ನೋಡಿದರೆ, ಗೇಮ್ಸ್ ಸಹಿತ ಶೇ.90ರಷ್ಟು ಕೆಟ್ಟದ್ದನ್ನು ವೀಕ್ಷಿಸುತ್ತಾರೆ. ಜತೆಗೆ ಆನ್‌ಲೈನ್ ವಂಚನೆಗೂ ಒಳಗಾಗುತ್ತಿದ್ದಾರೆ. ಆನ್‌ಲೈನ್ ಸುರಕ್ಷಿತ ಬಳಕೆ ಬಗ್ಗೆ ಜಾಗೃತಿ ಅಗತ್ಯ ಎಂದು ಹೇಳಿದರು.
ಮಂಗಳೂರು ಸಿಸಿಆರ್‌ಬಿ ಎಸಿಪಿ ಗೀತಾ ಕುಲಕರ್ಣಿ ಮಾತನಾಡಿ, ಪೊಲೀಸ್ ಇಲಾಖೆ ವತಿಯಿಂದ ಹೊಸದಾಗಿ ಮನೆ ಮನೆಗೆ ಪೊಲೀಸರು ಭೇಟಿ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ. ಈ ಸಂದರ್ಭ ಸೈಬರ್ ಕ್ರೈಂ ಸಹಿತ ವಿವಿಧ ವಿಷಯಗಳ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಮಂಗಳೂರು ವಿಭಾಗ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ್, ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್, ಕಾರ್ಮಿಕ ಅಧಿಕಾರಿ ವಿಲ್ಮಾ ಅತಿಥಿಯಾಗಿದ್ದರು.
ರತಿ ಫೌಂಡೇಶನ್ ಡಿಜಿಟಲ್ ಸುರಕ್ಷತೆ ಸಂಶೋಧನೆ ಮತ್ತು ವಕಾಲತ್ತು ವಿಭಾಗ ಮುಖ್ಯಸ್ಥ ಸಿದ್ಧಾರ್ಥ್ ಪಿ. ಅಧ್ಯಕ್ಷತೆ ವಹಿಸಿದ್ದರು. ಒಆರ್‌ಇಎಸ್‌ಪಿ ಸ್ಥಾಪಕಿ ಹಾಗೂ ಕಾರ್ಯನಿರ್ವಹಣಾ ನಿರ್ದೇಶಕಿ ಡಾ. ಕೀರ್ತಿ ನಕ್ರೆ ಸ್ವಾಗತಿಸಿ, ಪಡಿ ಕಾರ್ಯನಿರ್ವಾಹಕ ಅಧಿಕಾರಿ ರೆನ್ನಿ ಡಿಸೋಜ ವಂದಿಸಿದರು.