ಯುವಜನ ಸಬಲೀಕರಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರಗಳು ಸಂಪೂರ್ಣ ವಿಫಲವಾಗಿದೆ: ಕೇರಳ ಶಾಸಕ ಎಂ. ವಿಜಿನ್ ಆರೋಪ
Tuesday, September 9, 2025
ಮಂಗಳೂರು: 'ಯುವಜನರ ನಡಿಗೆ ಉದ್ಯೋಗದ ಕಡೆಗೆ', ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕ್ಲೆಗ್ ಮಲ್ಲಪಾಲ್" ಎಂಬ ಘೋಷಣೆ ಯೊಂದಿಗೆ ಡಿವೈಎಫ್‌ಐ ಜಿಲ್ಲಾ ಸಮಿತಿ ನಡೆಸುತ್ತಿರುವ ಮೂರು ದಿನಗಳ ಯುಜನ ಜಾಥಾ ಇಂದು ಮಂಗಳೂರಿನಲ್ಲಿ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಭೆಯೊಂದಿಗೆ ಸಮಾರೋಪಗೊಂಡಿತು.
ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಕೇರಳದ ಶಾಸಕ ಎಂ.ವಿಜಿನ್ "ಯುವಜನ ಸಬಲೀಕರಣದಲ್ಲಿ ಕೇಂದ್ರದ ಬಿಜೆಪಿ ಸರಕಾರ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಸ್ಥಳೀಯ ಜಿಲ್ಲಾಡಳಿತ ಕೂಡಾ ಸ್ಥಳೀಯರಿಗೆ ಪ್ರತಿನಿತ್ಯದ ಮೇರೆ ಉದ್ಯೋಗ ಕಲ್ಪಿಸುವಲ್ಲಿ ವಿಫಲವಾಗಿದೆ" ಎಂದು ಸರಕಾರಗಳ ವಿರುದ್ದ ವಾಗ್ದಾಳಿ ನಡೆಸಿದರು.
"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಭರವಸೆಗಳೊಂದಿಗೆ ಎಂ.ಆರ್.ಪಿ.ಎಲ್ ಎಂಬ ಸಂಸ್ಥೆಯನ್ನು ಆರಂಭಿಸಿದರು. ಆದರೆ ಎಂ.ಆರ್.ಪಿ.ಎಲ್ ಸಂಸ್ಥೆಯಿಂದ ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯ ಹದಗೆಡಿಸಿದೆಯೇ ಹೊರತು, ಜಿಲ್ಲೆಯಲ್ಲಿನ ಬೆರಳೆಣಿಕೆಯ ಜನರಿಗೂ ಉದ್ಯೋಗ ಕೊಡಿಸಲು ಸ್ಥಳೀಯ ಸರ್ಕಾರಗಳಿಗೆ ಸಾಧ್ಯವಾಗಲಿಲ್ಲ. ಮಂಗಳೂರಿನಲ್ಲಿ ಎಂ.ಆರ್.ಪಿ.ಎಲ್, ಎಂ.ಎಸ್.ಇ.ಝಡ್, ಒ.ಎನ್.ಜಿ.ಸಿ, ಬಂದರು ಸೇರಿದಂತೆ ಹಲವು ಸಂಸ್ಥೆಗಳನ್ನು ಹಲವು ಭರವಸೆ, ಹಾಗೂ ಆಸೆಗಳನ್ನು ಹುಟ್ಟಿಸಿ ಜಿಲ್ಲೆಯಲ್ಲಿ ನಿರ್ಮಿಸಿದರೂ ಜಿಲ್ಲೆಯ ಜನತೆಗೆ ವಿದ್ಯಾವಂತ ಯುವಕರಿಗೆ ಉದ್ಯೋಗ ಕೊಡಿಸದೇ ಜಿಲ್ಲೆಯ ಜನತೆಗೆ ಮೋಸ ಮಾಡಿರುವುದರಿಂದಲೇ ಸ್ಥಳಿಯರಿಗೆ ಯಾವ ಕಾರಣಕ್ಕಾಗಿ ಉದ್ಯೋಗಾವಕಾಶ ಕೊಡಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಜಿಲ್ಲೆಯ ಜನರಿಗೆ ಉತ್ತರವನ್ನು ನೀಡಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಮೇಲೆ ವಾಗ್ದಾಳಿ ನಡೆಸಿದ ಡಿವೈಎಫ್‌ಐ ರಾಷ್ಟ್ರೀಯ ಪದಾಧಿಕಾರಿ ಸಮಿತಿ ಸದಸ್ಯರೂ ಆಗಿರುವ ಶಾಸಕ ಎಂ ವಿಜಿನ್ " ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ನಿರುದ್ಯೋಗದ ಮೇಕ್ ಇನ್ ಅಷ್ಟೇ ಆಗಿದೆ. ಮೇಕ್ ಇನ್ ಇಂಡಿಯಾ ಅಂಬಾನಿ, ಅದಾನಿಗಳಿಗಷ್ಟರೆ ಸೀಮಿತವಾಗಿ ಉಳಿದಿದೆ. ಹಾಗಾಗಿಯೇ ದೇಶ ಹಿಂದೆಂದೂ ಕಾಣದ ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದೆ. ದೇಶದಲ್ಲಿ ಮೌಲ್ಯಯುತವಾದ ಜೀವನವನ್ನು ನಡೆಸಲು ಕೂಡಾ ಹೋರಾಟಗಳನ್ನು ನಡೆಸಬೇಕಾದ ಅನಿವಾರ್ಯತೆ ಬಂದೊದಗಿದೆ. ಅಲ್ಪ ಸಂಖ್ಯಾತರ ಮೇಲೆ ಮತೀಯ ದಾಳಿಗಳ ಮೂಲಕ ದಮನಿಸಲಾಗುತ್ತಿದೆ. ದೇಶದಲ್ಲಿನ ವಿದ್ಯಾರ್ಥಿಗಳು, ಯುವಜನರು, ರೈತರು ಹಾಗೂ ಕಾರ್ಮಿಕರು ಕೇಂದ್ರ ಸರಕಾರದ ನೀತಿಗಳ ವಿರುದ್ದವಾಗಿ ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ ಮೋದಿ, ಅಮಿತ್ ಶಾ ನೇತೃತ್ವದ ಸತಕಾರ ತನ್ನ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡು ಜನತೆಯ ಸಂಪೂರ್ಣ ಸಮಸ್ಯೆಗಳನ್ನು ಕಡೆಗಣಿಸುತ್ತಿದೆ" ಎಂದು ಅಭಿಪ್ರಾಯಪಟ್ಟರು.
ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಮಾತನಾಡಿ "ರಾಜ್ಯ ಸರಕಾರಕ್ಕೆ ಯುವಜನತೆಯ ಮೌಲ್ಯಯುತ ಜೀವನವನ್ನು ನಡೆಸುವ ನಿಟ್ಟಿನಲ್ಲಿ ಸ್ಪಷ್ಟವಾದ ಕಣ್ಣೋಟ ಹಾಗೂ ನೀತಿಗಳನ್ನು ಇಟ್ಟುಕೊಂಡಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಸಿ ಮತ್ತು ಡಿ ಹುದ್ದೆಗಳಲ್ಲಿ ನೂರಕ್ಕೆ ನೂರು ಸ್ಥಳೀಯರಿಗೆ ಆದ್ಯತೆಯನ್ನು ನೀಡಬೇಕು ಎಂದು ವರ್ಷಗಳಿಂದೀಚೆಗೆ ಹೋರಾಟಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಅವುಗಳನ್ನು ಮನ್ನಣೆಗೆ ತೆಗೆದುಕೊಳ್ಳುತ್ತಿಲ್ಲ. 1986ರಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಹಲವು ಶಿಫಾರಸುಗಳನ್ನು ನೀಡಿದರೂ ಅದನ್ನು ಕಾರ್ಯರೂಪಕ್ಕೆ ತರಲು ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್, ಬಿಜೆಪಿ ಸರಕಾರಗಳಿಗೆ ಸಾಧ್ಯವಾಗದೇ ಇರೋದು ನಾಚಿಕೆಗೇಡಿನ ಸಂಗತಿ. ಸರಕಾರ ಖಾಲಿ ಬಿದ್ದಿರುವ ಹುದ್ದೆಗಳನ್ನು ಭರ್ತಿಗೊಳಿಸದೆ ಇದ್ದಲ್ಲಿ ರಾಜ್ಯವ್ಯಾಪಿ ಡಿವೈಎಫ್ಐ ಹೋರಾಟ ನಡೆಸುತ್ತದೆ" ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಿಂತಕ ಪ್ರೋ ಫಣಿರಾಜ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಆದ್ಯತೆ ಒದಗಿಸಿ, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತನ್ನಿ ಎಂಬ ಬೇಡಿಕೆಯೊಂದಿಗೆ ಸೆ.7ರಂದು ಬೆಳ್ತಂಗಡಿ ಯಿಂದ ಆರಂಭವಾಗಿರುವ ಯುವಜನ ಜಾಥಾ ಜಿಲ್ಲೆಯಾದ್ಯಂತ ಸಂಚರಿಸಿ ಬೃಹತ್ ಮೆರವಣಿಗೆಯ ನಂತರ ಮಂಗಳೂರಿನ ಮಿನಿ ವಿಧಾನಸೌದದ ಮುಂಭಾಗದಲ್ಲಿ ನಡೆದ ಸಮಾರೋಪ ಸಭೆಯಲ್ಲಿ ಪ್ರೊ. ನರೇಂದ್ರ ನಾಯಕ್, ಮಂಜುಳಾ ನಾಯಕ್, ಜಿಲ್ಲಾ ನಾಯಕರಾದ ಮನೋಜ್ ವಾಮಂಜೂರು, ನಿತಿನ್ ಕುತ್ತಾರ್, ನವೀನ್ ಕೊಂಚಾಡಿ, ತಯ್ಯೂಬ್ ಬೆಂಗ್ರೆ, ರಝಾಕ್ ಮುಡಿಪು ಮುಂತಾದವರು ಉಪಸ್ಥಿತರಿದ್ದರು. ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಸಭೆಯ ಅಧ್ಯಕ್ಷತೆ ವಹಿಸಿದ್ದರು,ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.











