
ವಿಚಾರಣೆಗೆ ಹಾಜರಾಗದ ಮಹೇಶ್ ಶೆಟ್ಟಿ ತಿಮರೋಡಿ
ಮಂಗಳೂರು: ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಕೇಸು ಎದುರಿಸುತ್ತಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಭಾನುವಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿಲ್ಲ.
ಈ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಪೊಲೀಸರು ಎರಡನೇ ಬಾರಿ ನೋಟಿಸ್ ಅಂಟಿಸಿದ್ದಾರೆ. ಸೆ.25 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿಗೊಳಿಸಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ತಲೆಬುರುಡೆ ಪತ್ತೆ ಪ್ರಕರಣದಲ್ಲಿ ಆರೋಪಿ ಚಿನ್ನಯ್ಯನಿಗೆ ಆಶ್ರಯ ನೀಡಿದ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಹಜರಿಗೆ ತೆರಳಿದ ವೇಳೆ ಅಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದು ಪತ್ತೆಯಾಗಿತ್ತು. ಅದನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಶಸ್ತ್ರಾಸ್ತ್ರ ಕಾಯ್ದೆಯಡಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸರು ಕೇಸು ದಾಖಲಿಸಿದ್ದರು.
ಈ ಬಗ್ಗೆ ವಿಚಾರಣೆಗೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಬೆಳ್ತಂಗಡಿ ಪೊಲೀಸರು ತೆರಳಿದ್ದ ವೇಳೆ ಅವರು ನಾಪತ್ತೆಯಾಗಿದ್ದರು. ಹೀಗಾಗಿ ಅವರ ಮನೆಯ ಗೋಡೆಗೆ ಪೊಲೀಸರು ನೋಟಿಸ್ ಅಂಟಿಸಿ ಸೆ.21 ರಂದು ಠಾಣೆಗೆ ಪರವಾನಿಗೆ ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆಗ ನಾಪತ್ತೆಯಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ ಭಾನುವಾರವೂ ವಿಚಾರಣೆಗೆ ಹಾಜರಾಗಿಲ್ಲ.
ನಿರಂತರ ವಿಡಿಯೋ ಬಿಡುಗಡೆ!:
ಪೊಲೀಸರ ವಿಚಾರಣೆಗೆ ಹಾಜರಾಗದೆ ಮಹೇಶ್ ಶೆಟ್ಟಿ ನಾಪತ್ತೆಯಾದ ಬೆನ್ನಿಗೇ ಬುರುಡೆ ಆರೋಪಿ ಚಿನ್ನಯ್ಯ ಮತ್ತು ಮಹೇಶ್ ಶೆಟ್ಟಿ ನಡುವಿನ ಸಂಭಾಷಣೆಯ ವಿಡಿಯೋ ಒಂದೊಂದೇ ಬಿಡುಗಡೆಯಾಗುತ್ತಿದ್ದು, ಭಾನುವಾರ ಎಂಟನೇ ವಿಡಿಯೋ ಜಾಲತಾಣಗಳಲ್ಲಿ ಬಿಡುಗಡೆಗೊಂಡಿದೆ. ಶುಕ್ರವಾರ ಮೊದಲ ವಿಡಿಯೋ ಬಿಡುಗಡೆಯಾಗಿದ್ದು, ಶನಿವಾರ ಮತ್ತೆರಡು ವಿಡಿಯೋ ಕಾಣಿಸಿತ್ತು. ಭಾನುವಾರ ವೇಳೆಗೆ ಇದು ಎಂಟು ತಲುಪಿದೆ. 2023ರಲ್ಲಿ ತಿಮರೋಡಿ ಮನೆಯಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ ಎಂದು ಹೇಳಲಾಗಿದೆ. ಆದರೆ ಅದನ್ನು ಯಾರೂ ಅಧಿಕೃತವಾಗಿ ಖಚಿತಪಡಿಸಿಲ್ಲ.
ಸಂತೋಷ್ ರಾವ್ ಸೆರೆ ವರೆಗೆ ಮಾತು:
ಕೊನೆಯ ಐದು ವಿಡಿಯೋಗಳಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಬೇರೆ ಬೇರೆ ಸಾವಿನ ಘಟನೆಗಳ ಬಗ್ಗೆ ಚಿನ್ನಯ್ಯ ಮಾತನಾಡಿದ್ದಾನೆ. ಸೌಜನ್ಯ ಹತ್ಯೆಯ ನಂತರ ಏನೇ ನು ನಡೆಯಿತು, ಆರೋಪಿ ಸಂತೋಷ್ ರಾವ್ ಸೆರೆ ಸಿಕ್ಕಿದ್ದು ಹೇಗೆ ಎಂಬಿತ್ಯಾದಿ ಸಂಗತಿಗಳನ್ನು ತಿಮರೋಡಿ ಜೊತೆ ಚಿನ್ನಯ್ಯ ಹಂಚಿಕೊಂಡಿರುವುದು ವಿಡಿಯೋದಲ್ಲಿದೆ.