ಅಬ್ಬಕ್ಕ ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು: ಪ್ರೊ. ಸಿದ್ದು ಪಿ. ಅಲಗೂರ್
ಮಂಗಳೂರು: ದೇಶದ ಸ್ವಾತಂತ್ರ್ಯಕ್ಕಾಗಿ ಉಳ್ಳಾಲದ ವೀರರಾಣಿ ಅಬ್ಬಕ್ಕಳ ತ್ಯಾಗ, ಬಲಿದಾನ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಅಬ್ಬಕ್ಕ ರಾಣಿಯ ಆಡಳಿತ, ಸಾಮಾಜಿಕ, ಧಾರ್ಮಿಕ ವಿಚಾರಗಳು ಇಂದಿನ ಯುವಪೀಳಿಗೆಯಲ್ಲಿ ಚಾರಿತ್ರ್ಯನಿರ್ಮಾಣಕ್ಕೆ ಪ್ರೇರಣೆಯಾಗಬೇಕು ಎಂದು ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ. ಸಿದ್ದು ಪಿ. ಅಲಗೂರ್ ಹೇಳಿದರು.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ರಾಜ್ಯಾದ್ಯಂತ ಸಂಚರಿಸಿದ ರಾಣಿ ಅಬ್ಬಕ್ಕ ರಥಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪರಕೀಯರಾದ ಪೋರ್ಚುಗೀಸರ ವಿರುದ್ಧ ದಿಟ್ಟ ಹೋರಾಟ ಸಂಘಟಿಸಿ ಪೋರ್ಚುಗೀಸರಿಗೆ ನಡುಕ ಹುಟ್ಟಿಸಿದ ಧೀರ ಮಹಿಳೆ ಅಬ್ಬಕ್ಕ. ಅಬ್ಬಕ್ಕಳ ಶೌರ್ಯ ಇಂದಿನ ಯುವಜನತೆಯಲ್ಲಿ ಮೂಡಿಬರಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಲೇಖಕಿ ರಶ್ಮಿ ಸಾಮಂತ್ ಮಾತನಾಡಿ, ಕರಾವಳಿಯಲ್ಲಿ ರಾಣಿ ಅಬ್ಬಕ್ಕಳ ಸಹಿತ ಅನೇಕ ಮಂದಿ ಮಹಿಳಾ ಸಾಧಕರು ಆದರ್ಶವಾಗಿ ನಮ್ಮ ಮುಂದಿದ್ದಾರೆ. ಅಬ್ಬಕ್ಕ ಹೆಸರಿಗಷ್ಟೇ ರಾಣಿಯಾಗಿರದೇ ಶೌರ್ಯ, ಸಾಹಸ ಪ್ರತೀಕವಾಗಿದ್ದರು. ಕರಾವಳಿಯ ಮಹಿಳೆಯರಿಗೆ ಸಾಧನೆಗೆ ಅಬ್ಬಕ್ಕನ ವ್ಯಕ್ತಿತ್ವ ಪ್ರೇರಣೆಯಾಗಿದೆ ಎಂದು ಹೇಳಿದರು.
ಮೂಡುಬಿದಿರೆಯ ರಾಣಿ ಅಬ್ಬಕ್ಕ ಮನೆತನ ವಂಶಸ್ಥ ಕುಲದೀಪ್ ಚೌಟ ಮಾತನಾಡಿ, ಉಳ್ಳಾಲದ ರಾಣಿ ಅಬ್ಬಕ್ಕಳ ಹೆಸರಿನಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಿದ ಎಬಿವಿಪಿಯ ಕಾರ್ಯ ಅಭಿನಂದನೀಯ ಎಂದರು.
ಬೆಳ್ತಂಗಡಿ ಎಕ್ಸೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ, ರಥಯಾತ್ರೆಯ ಮೂಲಕ ರಾಜ್ಯಾದ್ಯಂತ ರಾಣಿ ಅಬ್ಬಕ್ಕಳ ಪರಿಚಯ ಆಗಿದೆ. ಇದಕ್ಕಾಗಿ ಶ್ರಮಿಸಿದ ಎಬಿವಿಪಿಯ ಶ್ರಮ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಡಾ. ರವಿ ಮಂಡ್ಯ ಮಾತನಾಡಿ, ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕಳ 500ನೇ ಜನ್ಮ ಜಯಂತಿಯ ಪ್ರಯುಕ್ತ ಎಬಿವಿಪಿ ವತಿಯಿಂದ ಅಬ್ಬಕ್ಕಳ ಹೆಸರಿನಲ್ಲಿ ಎರಡು ರಥಯಾತ್ರೆ ರಾಜ್ಯಾದ್ಯಂತ ಯಶಸ್ವಿಯಾಗಿ ಸಂಚರಿಸಿದೆ. ಆ ಮೂಲಕ ರಾಜ್ಯದ ಕಾಲೇಜು, ವಿಶ್ವವಿದ್ಯಾಲಯಗಳ ಕ್ಯಾಂಪಸ್ನಲ್ಲಿ ಅಬ್ಬಕ್ಕಳ ಪರಿಚಯ ಆಗಿದೆ. ಜಾತಿ, ಪಕ್ಷಬೇಧ ಮರೆತು ಇಡೀ ಸಮಾಜ ಒಟ್ಟಾಗಿ ಈ ರಥಯಾತ್ರೆಗೆ ಬೆಂಬಲ ನೀಡಿದೆ ಎಂದರು.
ಮುಖ್ಯ ವಕ್ತಾರರಾಗಿದ್ದ ಬಂಟ್ವಾಳ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಸಂಸ್ಥಾಪಕ ಡಾ. ತುಕಾರಾಮ್ ಪೂಜಾರಿ, ಅರ್ಪಣಾ ಮನೋಭಾವದಿಂದ ದೇಶಕ್ಕೆ ಹೇಗೆ ಸೇವೆ ಸಲ್ಲಿಸಬಹುದು ಎಂಬುದಕ್ಕೆ ವೀರರಾಣಿ ಅಬ್ಬಕ್ಕ ಉದಾಹರಣೆಯಾಗಿದ್ದಾರೆ. ಕ್ರೂರತ್ವ ಹೊಂದಿದ್ದ ಪೋರ್ಚುಗೀಸರ ವಿರುದ್ಧ ಸಾಮಾನ್ಯ ಮಹಿಳೆಯಾದ ಅಬ್ಬಕ್ಕ ಹೋರಾಟ ನಡೆಸಿ ಗೆಲುವು ಪಡೆದಿದ್ದರು ಎಂಬುದು ಅಂದಿನ ಅಚ್ಚರಿಯಾಗಿತ್ತು. ತರಬೇತಿ ಪಡೆದ ಸೈನ್ಯ ಹೊಂದಿದ್ದ, ಮತಾಂಧತೆ, ಕ್ರೂರತ್ವ, ಮೋಸ, ವಂಚನೆಗೆ ಇನ್ನೊಂದು ಹೆಸರಾದ ಪೋರ್ಚುಗೀಸರ ವಿರುದ್ಧ ಉಳ್ಳಾಲದಂತಹ ಸಣ್ಣ ಪ್ರಾಂತ್ಯದ ರಾಣಿ ಅಬ್ಬಕ್ಕಳ ಹೋರಾಟ ಅತ್ಯಂತ ಮಹತ್ವದ ಸಂಗತಿ ಎಂದರು.
ಅಭಯರಾಣಿ- ವೀರರಾಣಿ ಅಬ್ಬಕ್ಕ ಪುಸ್ತಕವನ್ನು ಈ ವೇಳೆ ಬಿಡುಗಡೆ ಮಾಡಲಾಯಿತು. ಪುಸ್ತಕದ ಸಂಪಾದಕ ಯೋಗೀಶ್ ಕೈರೋಡಿ ಅವರನ್ನು ಗೌರವಿಸಲಾಯಿತು.
ಅಬ್ಬಕ್ಕ ರಥಯಾತ್ರೆಯ ಸಮಾರೋಪ ಅಂಗವಾಗಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಕ್ರೀಡಾಂಗಣದಿಂದ ಪುರಭವನದವರೆಗೆ ಬೃಹತ್ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆ ಉದ್ಘಾಟನೆ ಸಂದರ್ಭ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಪ್ರಮುಖರಾದ ಚ.ನ. ಶಂಕರರಾವ್, ಡಾ. ಆಶಾಜ್ಯೋತಿ ರೈ, ವಾಸುದೇವ ಕಾಮತ್ ಉಪಸ್ಥಿತರಿದ್ದರು.
ರಥಯಾತ್ರೆಯ ಸಂಚಾಲಕರಾದ ಗುರುಪ್ರಸಾದ್, ಯಶವಂತ್ ನಟರಾಜ್ ಉಪಸ್ಥಿತರಿದ್ದರು. ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ದಕ್ಷಿಣ ಪ್ರಾಂತ ಕಾರ್ಯದರ್ಶಿ ಪ್ರವೀಣ್ ಎಚ್.ಕೆ. ಸ್ವಾಗತಿಸಿದರು. ಮಂಗಳೂರು ಮಹಾನಗರ ಕಾರ್ಯದರ್ಶಿ ಶ್ರೀಲಕ್ಷ್ಮಿ ವಂದಿಸಿದರು. ಪ್ರಾಂತ ವಿದ್ಯಾರ್ಥಿನಿ ಪ್ರಮುಖ್ ಸುಧಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.