ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ: ಗುಣಮಟ್ಟದ ತನಿಖೆಗೆ ಗಡ್ಕರಿಗೆ ಪತ್ರ
ಮಂಗಳೂರು: ಕರಾವಳಿ ಭಾಗದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅವೈಜ್ಞಾನಿಕತೆ ಮತ್ತು ಗುಣಮಟ್ಟದ ಬಗ್ಗೆ ತನಿಖೆಗೆ ಆದೇಶಿಸಬೇಕು. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಎಚ್-66ರ ಅಲ್ಲಲ್ಲಿ ಫ್ಲೈಓವರ್ ಸೇರಿದಂತೆ ಅವೈಜ್ಞಾನಿಕ ಕಾಮಗಾರಿಗಳಿಂದ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಉಳಿದೆಲ್ಲ ಕಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಅಪೂರ್ಣವಾಗಿವೆ. ಹೆದ್ದಾರಿಯಲ್ಲೇ ಮಳೆ ನೀರ ಪ್ರವಾಹ ಹರಿಯುತ್ತದೆ. ಯಾವುದೇ ಹೆದ್ದಾರಿ ನಿಗದಿತ ಕಾಲಕ್ಕೆ ಪೂರ್ತಿಯಾಗಿಲ್ಲ. ಹೆದ್ದಾರಿಗಳಲ್ಲೇ ಈ ರೀತಿಯ ಸಮಸ್ಯೆಗಳು ಏಕೆ ಉದ್ಭವಿಸಿವೆ ಎಂಬ ಬಗ್ಗೆ ತನಿಖೆ ನಡೆಸಿ, ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಮಾಡುವುದು ಹೇಗೆ ಅಂತ ಕೇರಳ ಭಾಗಕ್ಕೆ ಹೋಗಿ ನೋಡಿ. ಅಲ್ಲಿ ಸಾಧ್ಯವಾಗುವಂಥದ್ದು ಕರಾವಳಿಯಲ್ಲೇಕೆ ಸಾಧ್ಯ ಆಗುತ್ತಿಲ್ಲ? ಸಾಕಷ್ಟು ಅನುದಾನ ಇದ್ದರೂ ಹೆದ್ದಾರಿಗಳ ನಿರ್ವಹಣೆಯೇ ಆಗುತ್ತಿಲ್ಲ. ಅನುದಾನ ಕೊರತೆ ಇದ್ದರೆ ಸಂಸದರು ಈ ವಿಚಾರವನ್ನು ಸಂಸತ್ತಲ್ಲೇ ಹೇಳಲಿ ಎಂದು ಐವನ್ ಡಿಸೋಜ ಸವಾಲು ಹಾಕಿದರು.
‘ಕ್ರೈಸ್ತ’ ನಮೂದಿಸಿ..
ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆ ವೇಳೆ ಕರಾವಳಿಯ ಎಲ್ಲ ಕ್ರೈಸ್ತ ಸಮುದಾಯದವರು ತಮ್ಮ ಧರ್ಮವನ್ನು ನಮೂದಿಸುವಾಗ ನಿಗದಿತ ಕಾಲಂನಲ್ಲಿ ‘ಕ್ರೈಸ್ತ’ ಎಂಬುದಾಗಿ ನಮೂದಿಸಬೇಕು. ಇದರಲ್ಲಿ ಯಾವುದೇ ಗೊಂದಲ ಇರಬಾರದು. ಬೇರೆ ಧರ್ಮಗಳಂತೆ ಕ್ರೈಸ್ತರಲ್ಲೂ ಉಪಜಾತಿಗಳಿವೆ. ಅವುಗಳನ್ನು ನಮೂದಿಸುವುದು ಆಯಾ ಉಪಜಾತಿಯವರಿಗೆ ಬಿಟ್ಟದ್ದು. ಅದನ್ನು ನಮೂದಿಸುವುದು ಕಡ್ಡಾಯವಲ್ಲ. ಆದರೆ ಧರ್ಮದ ಕಾಲಂನಲ್ಲಿ ತಪ್ಪದೆ ಕ್ರೈಸ್ತ ಎಂದೇ ನಮೂದಿಸುವಂತೆ ಸಲಹೆ ನೀಡಿದರು.
ಸೆ.22ರಿಂದ ನಡೆಯುವ ಈ ಜಾತಿ ಗಣತಿ ರಾಜ್ಯದ ಪ್ರಗತಿಗಾಗಿ ನಡೆಯುವ ಸಮೀಕ್ಷೆ. ಸರ್ವ ಸಮುದಾಯಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಸಮಗ್ರ ದತ್ತಾಂಶ ಸಂಗ್ರಹಿಸಿ ಪೂರಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಈ ಸಮೀಕ್ಷೆ ಆಧಾರವಾಗಲಿದೆ. ಇದಕ್ಕೆ ಎಲ್ಲ ಜನರೂ ಸಂಪೂರ್ಣ ಸಹಕಾರ ನೀಡಬೇಕು ಎಂದು ಹೇಳಿದರು.
ಮಂಗಳೂರು ಕೆಥೋಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಮಾ ಮೊಂತೆರೊ, ಪ್ರಮುಖರಾದ ಅರುಣ್ ಡಿಸೋಜ, ಮೀನಾ ಟೆಲ್ಲಿಸ್, ಸತೀಶ್ ಪೆಂಗಲ್, ಮನುರಾಜ್, ಭಾಸ್ಕರ್ ರಾವ್, ಸ್ಟ್ಯಾನಿ ಲೋಬೊ, ಚಂದ್ರಹಾಸ್ ಪೂಜಾರಿ, ಇಮ್ರಾನ್ ಉಪಸ್ಥಿತರಿದ್ದರು.