ಆರೋಗ್ಯವಂತ ಜೀವನಕ್ಕೆ ಯೋಗ ಸಹಕಾರಿ: ಶ್ರೀಶರವು ರಾಘವೇಂದ್ರ ಶಾಸ್ತ್ರೀ
Tuesday, September 16, 2025
ಮಂಗಳೂರು: ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯವಂತ ಜೀವನ ನಡೆಸಲು ಸಾಧ್ಯ. ನಾನು ನಿರಂತರ ಯೋಗಾಭ್ಯಾಸದಿಂದ ಪದ್ಮಾಸನದಲ್ಲಿ ಕುಳಿತು ದೇವರ ಪೂಜಾಕಾರ್ಯ ಮಾಡಲು ಇಂದಿಗೂ ಸಾಧ್ಯವಾಗುತ್ತದೆ ಎಂದು ಶರವು ದೇವಸ್ಥಾನದ ಆಡಳಿತ ಮೊಕ್ತೇಸರ ಆರ್. ರಾಘವೇಂದ್ರ ಶಾಸ್ತ್ರೀ ಹೇಳಿದರು.
ಅವರು ಸೆ.8 ರಂದು ಶ್ರೀ ಶರವು ಮಹಾ ಗಣಪತಿ ದೇವಸ್ಥಾನ ಮಂಗಳೂರು ಮತ್ತು ಎಸ್‌ಸಿಎಸ್ ಆಸ್ಪತ್ರೆಯ ಸಹಯೋಗದೊಂದಿಗೆ ದೇಲಂಪಾಡಿ ಯೋಗ ಪ್ರತಿಷ್ಠಾನದ ವತಿಯಿಂದ ದ.ಕ. ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರಿಂದ ಉತ್ತಮ ಜೀವನ ಶೈಲಿಗಾಗಿ ಸೆ.8 ರಿಂದ 22 ರವರೆಗೆ ಉಚಿತ ಯೋಗ ಶಿಬಿರವು ಶರವು ಮಹಾಗಣಪತಿ ದೇವಸ್ಥಾನದ ಧ್ಯಾನ ಮಂದಿರದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿ ಡಾ. ಜೀವರಾಜ ಸೊರಕೆ ಮಾತನಾಡಿ, ತಮ್ಮ 76ರ ಹರೆಯದಲ್ಲೂ ನಿರಂತರ ಯೋಗಾಭ್ಯಾಸ ಮಾಡುತ್ತಾ ಆರೋಗ್ಯವನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಂಡು ಬಂದಿದ್ದೇನೆ. ನಿಷ್ಠಾವಂತ ಗುರುಗಳಾದ ಗೋಪಾಲಕೃಷ್ಣ ದೇಲಂಪಾಡಿಯ ಅವರ ಮಾರ್ಗದರ್ಶನದಲ್ಲಿ ಇಂದಿಗೂ ಯೋಗಾಭ್ಯಾಸ ಮಾಡುತ್ತಿದ್ದೇನೆ ಎಂದರು.
ಶಿಬಿರವನ್ನು ನಡೆಸಿಕೊಡುವ ಯೋಗರತ್ನ ಗೋಪಾಲ ಕೃಷ್ಣ ದೇಲಂಪಾಡಿಯವರು ಯೋಗದ ಬಗ್ಗೆ ಸೂಕ್ತ ಮಾಹಿತಿ ನೀಡಿ, ಶಿಬಿರದಲ್ಲಿ ಸರಳ ವ್ಯಾಯಾಮ, ಸೂರ‍್ಯ ನಮಸ್ಕಾರ, ಕ್ರಿಯೆಗಳು, ಮುದ್ರೆಗಳು, ಯೋಗಾಸನ, ಸರಳ ಪ್ರಾಣಾಯಾಮ ಮತ್ತು ಸರಳ ಧ್ಯಾನ ಕಲಿಸಿಕೊಡಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ ನೀನಾ ಪೈ, ಸುಶೀಲಾ ಕುಮಾರಿ. ವಿ, ಸುಮಾ, ಭಾರತಿ, ಎಸ್ ರಾವ್, ನೀತಾ ಶೆಟ್ಟಿ, ಹರಿಣಿ, ವೀಣಾ ಸುರೇಶ್, ಸ್ಕಂದ, ಚಂದ್ರಹಾಸ ಮತ್ತು ಸುರೇಶ್ ಉಪಸ್ಥಿತರಿದ್ದರು.
ವೀಣಾ ಸುರೇಶ್ ಪ್ರಾರ್ಥನೆ ನಡೆಸಿಕೊಟ್ಟರು. ಸುಶೀಲಾ ಕುಮಾರಿ. ವಿ. ಕಾರ್ಯಕ್ರಮವನ್ನು ನಿರ್ವಹಿಸಿದರು.
ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು, ಧ್ಯಾನ ಮಂದಿರ ಶರವು ದೇವಸ್ಥಾನದಲ್ಲಿ ಸಂಜೆ 5.30 ಗಂಟೆಗೆ ಹೆಸರು ನೊಂದಾಯಿಸಿಕೊಳ್ಳಬಹುದು, ಸಂಜೆ 6 ಗಂಟೆಯಿಂದ 7.15ರ ವರೆಗೆ ಶಿಬಿರ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.













