
ಮೂಡುಬಿದಿರೆಯಲ್ಲಿ ವಿಶಿಷ್ಟ ಗುರುತಿನ ಚೀಟಿ ನೋಂದಣಿ ಶಿಬಿರಕ್ಕೆ ಚಾಲನೆ
Saturday, September 20, 2025
ಮೂಡಬಿದಿರೆ: ಇಲ್ಲಿನ ಪುರಸಭೆ ಹಾಗೂ ಸರ್ಕಾರಿ ಆಸ್ಪತ್ರೆ ಮೂಡಬಿದಿರೆ, ತಾಲೂಕು ಪಂಚಾಯತ್ ಮೂಡಬಿದಿರೆ, ವಿಕಲಚೇತನರ ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಂಗಳೂರು, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮಂಗಳೂರು ನೇತೃತ್ವದಲ್ಲಿ ವಿಶಿಷ್ಟ ಗುರುತಿನ ಚೀಟಿ (UDID) ಮತ್ತು ಎಂಡೋಸಲ್ಫಾನ್ ತಪಾಸಣಾ ಶಿಬಿರಕ್ಕೆ ಶನಿವಾರ ಸಮಾಜಮಂದಿರದಲ್ಲಿ ಬೆಳಗ್ಗೆ ಆರಂಭಗೊಂಡಿತು.
ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ವಿಶೇಷಚೇತನರು ಸರಕಾರದ ಸೌಲಭ್ಯಗಳನ್ನು ಪಡೆಯಲು ವಿಶಿಷ್ಟ ಗುರುತಿನ ಚೀಟಿ ಅವಶ್ಯಕ. ಫಲಾನುಭವಿಗಳ ದೈಹಿಕ ಮತ್ತು ಆಥಿ೯ಕತೆಯ ಬಗ್ಗೆ ಹಚ್ಚಲು ಸಹಾಯ ಮಾಡುವುದಲ್ಲದೆ ಆಡಳಿತವಗ೯ಕ್ಕೆ ಕಾಯ೯ಕ್ರಮಗಳನ್ನು ಆಯೋಜಿಸಲು ಸಹಕಾರಿಯಾಗಿದೆಯಲ್ಲದೆ ದೂರದ ಊರಿಗೆ ಹೋಗಿ ಗುರುತಿನ ಚೀಟಿಯನ್ನು ಮಾಡಿಸಲು ಅಸಾಧ್ಯವಾಗಿರುವ ಎಷ್ಟೋ ಕುಟುಂಗಳಿಗೆ ಇಂದಿನ ಕಾಯ೯ಕ್ರಮದಿಂದ ಪ್ರಯೋಜನವಾಗಿದೆ ಎಂದರು.
ಉಪಾಧ್ಯಕ್ಷ ನಾಗರಾಜ ಪೂಜಾರಿ ಮಾತನಾಡಿ ವಿಕಲಚೇತನರಿಗೆ ರಾಜ್ಯ ಸರಕಾರದಿಂದ ವಿವಿಧ ಸವಲತ್ತುಗಳು/ಸೇವೆಗಳಿಗಾಗಿ UDID ಕಾರ್ಡ್ ಅತೀ ಅಗತ್ಯ ವಾಗಿದೆ ಈ ಮೂಲಕ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಮೂಡುಬಿದಿರೆ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್ ಮಾತನಾಡಿ, ಉತ್ತಮವಾದ ಕಾಯ೯ ಇದು. ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಮೊದಲು ಫಲಾನುಭವಿಗಳು ಮಂಗಳೂರಿಗೆ ಹೋಗಬೇಕಾಗಿತ್ತು ಆಗ ತುಂಬಾ ಕಷ್ಟವಾಗುತ್ತಿತ್ತು ಆದರೆ ಇದೀಗ ಮೂಡುಬಿದಿರೆ ಪುರಸಭೆಯು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಗುರುತಿನ ಚೀಟಿಯನ್ನು ಇಲ್ಲಿಯೇ ಮಾಡಿಸುವ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಪುರಸಭಾ ಸದಸ್ಯರಾದ ಜೊಸ್ಸಿ ಮಿನೇಜಸ್, ಸುರೇಶ್ ಪ್ರಭು, ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನ ಅಧ್ಯಕ್ಷ ಹರೀಶ್ ಎಂ. ಕೆ ಭಾಗವಹಿಸಿ ಮಾತನಾಡಿದರು.
ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಸ್ವಾಗತಿಸಿ ಮಾತನಾಡಿ ಸೆ. 17ರಿಂದ ಅ. 2ರವರೆಗೆ ನಡೆಯುವ ಹಸಿರು ಹಬ್ಬಗಳ ಆಚರಣೆ, ಶೂನ್ಯ ತ್ಯಾಜ್ಯ ಸಮುದಾಯ ಕಾಯ೯ಕ್ರಮದ ಬಗ್ಗೆ ಮಾಹಿತಿ ನೀಡಿದರು.
ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಂಗಳೂರು ಇದರ ಎಂಆರ್ ಡಬ್ಲ್ಯೂ ಜಯಪ್ರಕಾಶ್ ಕಾಯ೯ಕ್ರಮ ನಿರೂಪಿಸಿದರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ವಂದಿಸಿದರು.