ಅ.2 ರಂದು ಕಲ್ಲಡ್ಕದಲ್ಲಿ ಕುಂಬಾರ ಸಹಕಾರ ಸಂಘದ 17 ಶಾಖೆ ಲೋಕಾರ್ಪಣೆ

ಅ.2 ರಂದು ಕಲ್ಲಡ್ಕದಲ್ಲಿ ಕುಂಬಾರ ಸಹಕಾರ ಸಂಘದ 17 ಶಾಖೆ ಲೋಕಾರ್ಪಣೆ


ಪುತ್ತೂರು: ದಕ ಕನ್ನಡ ಜಿಲ್ಲೆಯಲ್ಲಿ 16 ಶಾಖೆಗಳನ್ನು ಹೊಂದಿರುವ ಉಡುಪಿ ಮತ್ತು ಕೊಡಗು ಮೈಸೂರು ಕಾರ್ಯವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘ ನಿಯಮಿತ ಇದರ 17 ನೂತನ ಶಾಖೆ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಅ.2ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕುಂಬಾರಿಕೆ ಮತ್ತು ಗ್ರಾಮೀಣ ಗುಡಿ ಕೈಗಾರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ 67 ವರ್ಷಗಳ ಹಿಂದೆ ಸ್ಥಾಪಿತವಾದ ಈ ಕುಂಬಾರರ ಸಹಕಾರ ಸಂಘ ಗ್ರಾಂಈಣ ಭಾಗದ ಕುಶಲಕರ್ಮಿಗಳ ಬದುಕನ್ನು ಹಸನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರಸ್ತುತ 16 ಕಡೆಗಳಲ್ಲಿ ಬ್ಯಾಂಕಿಂಗ್ ಮತ್ತು ಮಾರಾಟ ಕೇಂದ್ರಗಳನ್ನು ಹೊಂದಿದೆ. ಪುತ್ತೂರು ಮತ್ತು ಬಿ.ಸಿ.ರೋಡ್ ನಲ್ಲಿ ಪ್ರದರ್ಶನ ಮಳಿಗೆ ಹಾಗೂ ಕುಂಬಾರಿಕೆ ಉತ್ಪಾದನಾ ಕೇಂದ್ರ ಹೊಂದಿರುವ ರಾಜ್ಯದ ಏಕೈಕ ಸಹಕಾರ ಸಂಘವಾಗಿದೆ. 135 ಕೋಟಿ ಠೇವಣಿ ಹೊಂದಿರುವ ದಕ ಜಿಲ್ಲೆಯಲ್ಲಿಯೇ ಗ್ರಾಮೀಣ ಗುಡಿಕೈಗಾರಿಕಾ ಉತ್ಪನ್ನಗಳನ್ನು ಖರೀದಿಸಿ ಮಾರಾಟ ಮಾಡುವ ಏಕೈಕ ಸಹಕಾರ ಸಂಘ ಇದಾಗಿದೆ. ಕಲ್ಲಡ್ಕ ಶಾಖೆಯ ಲೋಕಾರ್ಪಣಾ ಸಂದರ್ಭದಲ್ಲಿ ವಿಶೇಷವಾಗಿ ಇಲ್ಲಿ ಶೇಖರಿಸುವ ಠೇವಣಿಗಳಿಗೆ ಶೇ.10 ಬಡ್ಡಿ ನೀಡುವ ಯೋಜನೆ ಮಾಡಲಾಗಿದೆ. ‘ಸಹಕಾರದಿಂದ ಪ್ರಗತಿ.. ಪ್ರಗತಿಗಾಗಿ ಸಹಕಾರ’ ಎಂಬ ಚಿಂತನೆಯಡಿಯಲ್ಲಿ ಅಪರೂಪದ ಸಹಕಾರ ಸಂಘವಾಗಿ ಮೂಡಿಬಂದಿದೆ ಎಂದರು. 

ಜಿಲ್ಲೆಯ ಎಲ್ಲಾ ಭಾಗಗಳಲ್ಲಿಯೂ ಶಾಖೆಗಳನ್ನು ಪ್ರಾರಂಭ ಮಾಡುವ ಹಿನ್ನಲೆಯಲ್ಲಿ ಅಕ್ಟೋಬರ್ 22 ರಂದು ಕಡಬದಲ್ಲಿಯೂ 18ನೇ ನೂತನ ಶಾಖೆಯ ಲೋಕಾರ್ಪಣೆ ಕಾರ್ಯ ನಡೆಯಲಿದೆ. ಈಗಾಗಲೇ ಕಾರ್ಯವ್ಯಾಪ್ತಿ ಹೊಂದಿರುವ ಮೈಸೂರು ಕೊಡಗು ಹಾಗೂ ಉಡುಪಿ ಜಿಲ್ಲೆಗಳಲ್ಲಿಯೂ ಮುಂದಿನದಿನಗಳಲ್ಲಿ ಶಾಖೆಗಳನ್ನು ತೆರೆಯಲು ಚಿಂತನೆ ನಡೆಸಲಾಗಿದೆ. ಗುಡಿ ಕೈಗಾರಿಕಾ ಉತ್ಪನ್ನಗಳನ್ನು ಸಂಚಾರಿ ವ್ಯವಸ್ಥೆ ಮೂಲಕ ಮಾರಾಟ ನಡೆಸಲಾಗುತ್ತಿದೆ. ಈ ಗುಡಿಕೈಗಾರಿಕೆಗೆ ಬೇಕಾಗುವ ಮಣ್ಣು ಅಪರೂಪವಾಗುತ್ತಿದೆ. ಕೆಲವು ಖಾಸಗಿ ವ್ಯಕ್ತಿಗಳ ಭೂಮಿಯಲ್ಲಿ ಇಂತಹ ಮಣ್ಣು ಇದೆಯಾದರೂ ಅದಕ್ಕೆ ವಿಪರೀತವಾದ ದರ ಇದೆ. ಹಾಗಾಗಿ ಸರ್ಕಾರಿ ವ್ಯವಸ್ಥೆ ಮೂಲಕ ಮಣ್ಣು ಇರುವ ಜಾಗವನ್ನು ಸಂಘಕ್ಕೆ ನೀಡಿದರೆ ಉತ್ಪನ್ನಗಳ ದರ ಕಡಿತಗೊಳಿಸುವ ಮೂಲಕ ಜನರಿಗೂ ಭಾರವಾಗದಂತೆ ವ್ಯವಸ್ಥೆ ಮಾಡಬಹುದಾಗಿದೆ. ಈ ಬಗ್ಗೆ ಈಗಾಗಲೇ ಪುತ್ತೂರಿನ ಶಾಸಕರಿಗೆ ಮನವಿಯನ್ನೂ ಮಾಡಲಾಗಿದೆ ಎಂದು ಅವರು ತಿಳಿಸಿದರು. 

ಕಲ್ಲಡ್ದ ಈಶಾನ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭವಾಗಲಿರುವ ಈ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬೆಳಿಗ್ಗೆ 10.30ಕ್ಕೆ ದಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಬಾರದ ಗುಡಿಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ  ಭಾಸ್ಕರ ಎಂ ಪೆರುವಾಯಿ ವಹಿಸಲಿದ್ದಾರೆ. 

ಭದ್ರತಾ ಕೊಠಡಿಯನ್ನು ಗೋಳ್ತಮಜಲು ಗ್ರಾಪಂ ಅಧ್ಯಕ್ಷೆ ಪ್ರೇಮಾ ಉದ್ಘಾಟಿಸಲಿದ್ದಾರೆ.  ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ನ್ಯಾಯವಾದಿ ಕುಶಾಲಪ್ಪ ಕುಲಾಲ್, ಗೋಳ್ತಮಜಲು ಗ್ರಾಪಂ ಸದಸ್ಯ ಕೆ.ಮಹಮ್ಮದ್ ಮುಸ್ತಾಫಾ, ವಿಟ್ಲಪಟ್ಟಣ ಪಂಚಾಯತ್ ಕೆಎಂಎಎಸ್ ಮುಖ್ಯಾಧಿಕಾರಿ ಕರುಣಾಕರ ವಿ, ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ನಾರಾಯಣ ಸಿ ಪೆರ್ನೆ ಹಾಗೂ ಈಶಾನ ಕಾಂಪ್ಕೆಕ್ಸ್ ಮಾಲಕ ಗೋಪಾಲ ಕುಲಾಲ್ ಮುಖ್ಯ ಅಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಟಿಯಲ್ಲಿ ಸಂಘದ ನಿರ್ದೇಶಕ ಗಣೇಶ್ ಪಿ ಕುಲಾಲ್ ಬಜತ್ತೂರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಜನಾರ್ಧನ ಮೂಲ್ಯ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article