ಮುಂದಿನ ಶೈಕ್ಷಣಿಕ ವರ್ಷ 5 ಕೆಪಿಎಸ್ ಮಾದರಿ ಶಾಲೆಗಳು ಆರಂಭ: ಶಾಸಕ ಅಶೋಕ್ ಕುಮಾರ್ ರೈ
ಶನಿವಾರ ಬಜತ್ತೂರು ಗ್ರಾಮದ ಹೊಸಗದ್ದೆ ಹಿರಿಯಪ್ರಾಥಮಿಕ ಶಾಲೆಯಲ್ಲಿ ಎಂಆರ್‌ಪಿಎಲ್ ಹಾಗೂ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಾಣವಾದ 10 ಲಕ್ಷವೆಚ್ಚದ ಶೌಚಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಂಆರ್‌ಪಿಎಲ್‌ಗೆ ಈ ವರ್ಷ ಸುಮಾರು 10 ಕೋಟಿ ಬೇಡಿಕೆ ಇಡಲಾಗಿದೆ. ಸರ್ಕಾರವೂ ಮುಂದಿನ ವರ್ಷದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕೆಪಿಎಸ್ ಮಾದರಿ ಶಾಲೆಗಳಿಗಾಗಿ ರೂ.೨೫೦ಕೋಟಿ ಅನುದಾನ ಇಟ್ಟಿದೆ. ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾದ್ಯಮ-ಕನ್ನಡ ಮಾಧ್ಯಮ ಶಾಲೆಗಳು ಒಟ್ಟಾಗಿ ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿದರು.
ಮುಂದುವರಿದ ದೇಶಗಳಿಗೆ ಭಾರತವನ್ನು ಹೋಲಿಕೆ ಮಾಡಿದರೆ 175 ವರ್ಷಗಳಷ್ಟು ನಾವು ಹಿಂದೆ ಇದ್ದೇವೆ. ಹಾಗಾಗಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ವೇಗ ಹೆಚ್ಚಾಗಬೇಕಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಪುತ್ತೂರಿನಲ್ಲಿ ಕಾರ್ಮಿಕರ ಮಕ್ಕಳಿಗಾಗಿಯೇ ವಸತಿ ಸಹಿತ ಶಾಲೆ ಆರಂಭವಾಗಲಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ನಾವು ಹಿಂದೇಟು ಹಾಕಬಾರದು. ಸರ್ಕಾರಿ ಶಾಲೆಗಳಲ್ಲಿ ಈ ಅವಕಾಶ ಹೆಚ್ಚಾಗಿದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸುವ ಬಗ್ಗೆ ಚಿಂತನೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ವಸಂತಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಪ್ರದೀಪ್ ಅವರನ್ನು ಶಾಸಕರು ಸನ್ಮಾನಿಸಿದರು. ಶಾಲಾ ಪರವಾಗಿ ಶಾಸಕ ಅಶೋಕ್ ರೈ ಅವರನ್ನು ಸನ್ಮಾನಿಸಲಾಯಿತು.
ಉಪ್ಪಿನಂಗಡಿ ದಂತವೈದ್ಯ ಡಾ. ರಾಜಾರಾಮ್, ಬಜತ್ತೂರು ಗ್ರಾ.ಪಂ. ಸದಸ್ಯರಾದ ಸಂತೋಷ್ ಪಂರ್ದಾಜೆ, ಭಾಗೀರಥಿ, ಪ್ರೇಮಾ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ವಲಯಾಧ್ಯಕ್ಷ ವಿನೋದ್ ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ವಿದ್ಯಾ ಕೆ. ಸ್ವಾಗತಿಸಿದರು. ಸಿಆರ್‌ಪಿ ಮಂಜುನಾಥ್ ಕೆ.ಪಿ. ವಂದಿಸಿದರು. ಶಿಕ್ಷಕಿ ಮಾಲತಿ ಓಡ್ಲ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಚಿತ್ರಾಕ್ಷಿ, ಪವಿತ್ರ, ಪೋಷಕರಾದ ರುಕ್ಮಯ್ಯ ಗೌಡ ಓಮಂದೂರು, ಪೂವಣಿ ಗೌಡ, ಮಮತಾ, ಈಸುಬು, ಸವಿತಾ ಮತ್ತಿತರು ಭಾಗಿಯಾಗಿದ್ದರು.