ಸಂತ ಫಿಲೋಮಿನಾ ಕಾಲೇಜಿನಲ್ಲಿ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮ
Monday, September 1, 2025
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು ಇದರ ಸ್ಟಾಫ್ ಡೆವಲಪ್ಮೆಂಟ್ ಆಂಡ್ ಅಪ್ರೈಸಲ್ ಸೆಲ್ ಆಶ್ರಯದಲ್ಲಿ ‘ಮೈಂಡ್ ಫುಲ್ ಎಜುಕೇಟರ್’ ಕುರಿತು ಶಿಕ್ಷಕರಿಗಾಗಿ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮ ಕಾಲೇಜಿನ ಸ್ನಾತಕೋತ್ತರ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಆಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಶಿಕ್ಷಕರು ಬೇರೆ ಬೇರೆ ರೀತಿಯಲ್ಲಿ ಚರ್ಚಿಸುವುದು, ಬೇರೆ ಬೇರೆ ರೀತಿಯಲ್ಲಿ ಕಲಿಯುವುದು, ಬೇರೆ ಬೇರೆ ರೀತಿಯಲ್ಲಿ ‘ನಾನು’ ಎಂದರೆ ಏನು ಎಂಬುದನ್ನು ತಿಳಿಯುವುದು ಒಂದು ಸುಂದರವಾದ ಅಭ್ಯಾಸ. ಕೆಲವರು ತಮ್ಮ ಜೀವನದಲ್ಲಿ ತೊಂದರೆಗೊಳಗಾಗಿರುತ್ತಾರೆ, ಆಗ ಸಣ್ಣ ಸಮಸ್ಯೆಗಳು ದೊಡ್ಡದಾಗಿ ಕಾಣುತ್ತವೆ. ಇದಕ್ಕಾಗಿಯೇ ‘ಮೈಂಡ್ ಫುಲ್ ಎಜುಕೇಟರ್’ ಕಾರ್ಯಕ್ರಮವು ಜೀವನದ ಒತ್ತಡದಿಂದ ಹೊರಬರಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೌನ್ಸೆಲಿಂಗ್ ಸೈಕಾಲಜಿಸ್ಟ್ ಪ್ರೀತಿ ಶೆಣೈ ಮಾತನಾಡಿ, ಜೀವನದಲ್ಲಿ ಒತ್ತಡ ಎಂದರೇನು, ಪ್ರತಿದಿನ ಒತ್ತಡವನ್ನು ಕಡಿಮೆ ಮಾಡುವ ವಿಧಾನಗಳು ಮತ್ತು ಸಮಯ ನಿರ್ವಹಣೆ ಇದರ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯ್ ಕುಮಾರ್ ಮೊಳೆಯರ್, ಶೈಕ್ಷಣಿಕಾ ಕುಲಸಚಿವ ಡಾ. ನೋರ್ಬಟ್ ಮಸ್ಕರೇನ್ಹಸ್, ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶಿವಾನಿ ಮಲ್ಯ ಎನ್. ಅವರು ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮದ ಸಂಯೋಜಕ ಡಾ. ಎಡ್ವಿನ್ ಎಸ್. ಡಿ’ಸೋಜಾ ಸ್ವಾಗತಿಸಿ, ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿನಿಲ್ ರೋಹನ್ ಡಿಸೋಜಾ ವಂದಿಸಿದರು. ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುರಕ್ಷಾ ಎಸ್. ಕಾರ್ಯಕ್ರಮ ನಿರೂಪಿಸಿದರು.