
ಸಂತ ಫಿಲೋಮಿನಾ ಪ.ಪೂ ಕಾಲೇಜಿನಲ್ಲಿ ‘ವಿದ್ಯಾಸಂಸ್ಥೆ ಮತ್ತು ಸಮಾಜದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ’: ಕುರಿತು ಉಪನ್ಯಾಸ
Tuesday, September 2, 2025
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಬಾಲ ರಕ್ಷಣಾ ಹಾಗೂ ಮಹಿಳಾ ಸಬಲೀಕರಣ ಘಟಕದ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ‘ವಿದ್ಯಾಸಂಸ್ಥೆ ಮತ್ತು ಸಮಾಜದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ’ ಕುರಿತು ಉಪನ್ಯಾಸ ಕಾರ್ಯಕ್ರಮವು ಸೆ.2 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ, ಭಗವಂತ ಎಲ್ಲರಿಗೂ ಸಮಾನವಾದ ಅವಕಾಶವನ್ನು ನೀಡಿದ್ದು, ಅವಕಾಶಗಳನ್ನು ಬಳಸಿಕೊಂಡು ಬದುಕಿನಲ್ಲಿ ಸಾಧನೆಯನ್ನು ಮಾಡುವ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿತ್ವವನ್ನು ಬೆಳೆಸಿಕೊಂಡು, ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆಯನ್ನು ನೀಡಲು ಸಾಧ್ಯವೇ ಎಂಬುದನ್ನು ಯೋಚಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಕಾರ್ಯಕ್ರಮ ಆಯೋಜಕರನ್ನು ಅಭಿನಂದಿಸಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಸಾಮಾಜಿಕ ಬದುಕಿನಲ್ಲಿ ಉತ್ತಮ ನಡತೆ ನಮ್ಮ ಬದುಕಿಗೆ ದಾರಿದೀಪವಾಗಬಲ್ಲುದು. ನಮ್ಮ ನಡತೆ ಮತ್ತು ಗುಣಗಳು ನಮ್ಮ ಜೀವನಕ್ಕೆ ಅಡಿಪಾಯವಾಗಿದ್ದು, ಪುಸ್ತಕದ ಜ್ಞಾನ ಇದಕ್ಕೆ ಸಹಕಾರಿಯಾಗಬಹುದು ಎಂದು ಹೇಳಿದರು.
ವೇದಿಕೆಯಲ್ಲಿ ಬಾಲ ರಕ್ಷಣಾ ಹಾಗೂ ಮಹಿಳಾ ಸಬಲೀಕರಣ ಘಟಕದ ನಿರ್ದೇಶಕರಾದ ಡಾ. ಆಶಾ ಸಾವಿತ್ರಿ, ಸತ್ಯಲತಾ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ಅಪೂರ್ವ ಸ್ವಾಗತಿಸಿ, ಕಿಶೋರಿ ವಂದಿಸಿದರು. ಸಾಯಿ ನಂದನ್ ಕಾರ್ಯಕ್ರಮ ನಿರೂಪಿಸಿದರು.