ಬಡ ಕೃಷಿಕನ ಕಂದಾಯ ಜಾಗ ಅರಣ್ಯ ಇಲಾಖೆಯಿಂದ ತೆರವು
ಕಡಬ ತಾಲೂಕಿನ ಏನೇಕಲ್ಲು ಗ್ರಾಮದ ಕುಮಾರ್ ಪಿ. ಎಂಬವರು 1.44 ಎಕ್ರೆ ಮೀಸಲು ಅರಣ್ಯ ಪ್ರದೇಶವನ್ನು ಅತಿಕ್ರಮಿಸಿ ಕಟ್ಟಡ, ಕೃಷಿ ಮಾಡಿರುವ ಬಗ್ಗೆ ವ್ಯಕ್ತಿಯೊಬ್ಬರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮಕ್ಕೆ ಲೋಕಾಯುಕ್ತದಿಂದ ಅರಣ್ಯ ಇಲಾಖೆಗೆ ಸೂಚಿಸಲಾಗಿತ್ತು. ಅದರಂತೆ ಮಂಗಳೂರು ವೃತ್ತ ಸಿಸಿಎಫ್ ಅವರ ಆದೇಶದಂತೆ ಸುಳ್ಯ ಎಸಿಎಫ್, ಪಂಜ ವಲಯ ಅರಣ್ಯ ಅಧಿಕಾರಿಗಳು ದೂರಿನ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ವರದಿಯಂತೆ, ಏನೇಕಲ್ಲಿನಲ್ಲಿ ಕುಮಾರ್ ಅವರು ಅತಿಕ್ರಮಿಸಿದ ಅರಣ್ಯ ಜಾಗವನ್ನು ಅದರಲ್ಲಿರುವ ಕಟ್ಟಡಗಳು ಕೃತಾವಳಿಗಳನ್ನು ತೆರವುಗೊಳಿಸಿ, ಅರಣ್ಯ ಇಲಾಖೆಗೆ 7 ದಿನಗಳೊಳಗೆ ಬಿಟ್ಟು ಕೊಡುವಂತೆ ಕುಮಾರ್ ಅವರಿಗೆ ಸೂಚಿಸಲಾಗಿತ್ತು, ಅವರು ಬಿಟ್ಟು ಕೊಡದ ಇದ್ದಲ್ಲಿ ಪಂಜ ಅರಣ್ಯಾಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಸಿಸಿಎಫ್ ಆದೇಶಿಸಿದ್ದರು, ಅದರಂತೆ ಅಧಿಕಾರಿಗಳು ಶುಕ್ರವಾರ ಕಾರ್ಯಾಚರಣೆ ನಡೆಸಿದರು.
ಶುಕ್ರವಾರ ಬೆಳಗ್ಗೆ ಅರಣ್ಯ ಅಧಿಕಾರಿಗಳು ಕುಮಾರ್ ಅವರು ಅತಿಕ್ರಮಿಸಿದ ಜಾಗದಲ್ಲಿನ ಎರಡು ವರ್ಷದ ಅಡಿಕೆ, ಬಾಳೆ, ಗೇರು ಕೃಷಿ ಬೆಳೆಗಳನ್ನು ತೆರವು ಮಾಡಿ, ಅರಣ್ಯ ಗಿಡಗಳನ್ನು ನಾಟಿ ಮಾಡಿದರು.
ಸುಳ್ಯ ಎಸಿಎಫ್ ಪ್ರಶಾಂತ್ ಕುಮಾರ್ ಪೈ ಹಾಗೂ ಪಂಜ ವಲಯ ಅರಣ್ಯ ಅಧಿಕಾರಿ ಸಂದ್ಯಾ, ಸುಬ್ರಹ್ಮಣ್ಯ ವಲಯ ಅರಣ್ಯಅಧಿಕಾರಿ ವಿಮಲ್ ಬಾಬು ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕುಮಾರ್ ಅವರಿಂದ ತೆರವುಗೊಳಿಸಲಾದ 1.44 ಎಕ್ರೆ ಜಾಗಕ್ಕೆ ಕಡಬ ತಹಶೀಲ್ದಾರ್ ಅವರು ಹಕ್ಕುಪತ್ರ ನೀಡಿದ್ದಾರೆ. ಅರಣ್ಯಾಧಿಕಾರಿಗಳು ಕೃಷಿ ಭೂಮಿ ತೆರವುಗೊಳಿಸುವುದಕ್ಕೆ ಮನೆಯವರು ಹಾಗೂ ಊರಿನ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ. ಜೆಸಿಬಿ ಮೂಲಕ ಕೃಷಿ ಗಿಡ ತೆರವು ಮಾಡುವ ವೇಳೆ ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ಅಧಿಕಾರಿಗಳು ತಾವೇ ಕೈಯಿಂದ ಕೃಷಿ ಗಿಡಗಳನ್ನು ತೆರವು ಮಾಡಿದ ಘಟನೆಯೂ ನಡೆಯಿತು.