
ಭಜನೆಗಳು ಜೀವನ ಶಿಕ್ಷಣ ಕಲಿಸುತ್ತವೆ: ಬಿ.ಕೆ. ಧನಂಜಯ ರಾವ್
Saturday, September 20, 2025
ಉಜಿರೆ: ಜೀವನ ಶಿಕ್ಷಣವನ್ನು ಕಲಿಸುವ ಭಜನೆಗಳು ಸಾರ್ಥಕ ಬದುಕಿಗೆ ದಾರಿದೀಪವಾಗಿವೆ. ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಭಜನಾ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಬೆಳ್ತಂಗಡಿಯ ವಕೀಲ ಬಿ.ಕೆ. ಧನಂಜಯ ರಾವ್ ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಇಪ್ಪತ್ತೇಳನೇ ವರ್ಷದ ಭಜನಾ ಕಮ್ಮಟದಲ್ಲಿ ‘ಭಜನಾ ಸಂಸ್ಕೃತಿ ಬೆಳೆಸುವಲ್ಲಿ ಭಜನಾ ಮಂಡಳಿಗಳ ಪಾತ್ರ’ ಎಂಬ ವಿಷಯದ ಬಗ್ಯೆ ಉಪನ್ಯಾಸ ನೀಡಿದರು.
ಪ್ರತಿಯೊಬ್ಬ ಭಜಕನೂ ಒಂದು ಆಲಯವಿದ್ದಂತೆ ಎಂದು ಹೇಳಿದ ಅವರು ಭಜನಾ ಕಮ್ಮಟದಲ್ಲಿ ಭಾಗವಹಿಸಿದ ಭಜಕರೆಲ್ಲರೂ ಭಜನಾ ಸಂಸ್ಕೃತಿಯ ಮೂಲಕ ಆಧ್ಯಾತ್ಮಿಕ ವಿಚಾರಧಾರೆಗಳನ್ನು ಪಸರಿಸುವ ರಾಯಬಾರಿಗಳಾಗಬೇಕು. ಮಕ್ಕಳಿಗೂ ಭಜನೆ ಕಲಿಸುವ ಮೂಲಕ ಅವರನ್ನು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ್ ಸಾಲ್ಯಾನ್ ಗೌರವ ಉಪಸ್ಥಿತಿ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ತಿತರಿದ್ದರು.
ಶ್ರೀಧಾಮ, ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದಿವ್ಯಸಾನಿದ್ಯ ವಹಿಸಿದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಬಸ್ರೂರು, ಪದ್ಮರಾಜ್ ಜೈನ್, ಕೋಶಾಧಿಕಾರಿ, ಭಜನಾ ಕಮ್ಮಟ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ., ಅಳಿಯೂರು ಹಾಗೂ ರವೀಂದ್ರ ಇವರು ಕರ್ತವ್ಯ ನಿರ್ವಹಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಾಲೆಯ ಅಧ್ಯಾಪಕಿ ಶ್ರೀಜಾ ಯೋಗೀಶ್ ಕಾರ್ಯಕ್ರಮ ನಿರ್ವಹಿಸಿದರು.