ಧರ್ಮಸ್ಥಳದಲ್ಲಿ ಇಪ್ಪತ್ತೇಳನೇ ವರ್ಷದ ಭಜನಾ ಕಮ್ಮಟ: 23 ಶ್ರೇಷ್ಠ ಭಜನಾ ಮಂಡಳಿಗಳಿಗೆ ‘ಸಾಧಕ ಪ್ರಶಸ್ತಿ’ ಪ್ರದಾನ

ಧರ್ಮಸ್ಥಳದಲ್ಲಿ ಇಪ್ಪತ್ತೇಳನೇ ವರ್ಷದ ಭಜನಾ ಕಮ್ಮಟ: 23 ಶ್ರೇಷ್ಠ ಭಜನಾ ಮಂಡಳಿಗಳಿಗೆ ‘ಸಾಧಕ ಪ್ರಶಸ್ತಿ’ ಪ್ರದಾನ


ಉಜಿರೆ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನೇತೃತ್ವದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶನಿವಾರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಜನಾ ಕಮ್ಮಟದಲ್ಲಿ ಉತ್ತಮ ಸೇವೆ, ಸಾಧನೆ ಮಾಡಿದ 23 ಭಜನಾ ಮಂಡಳಿಗಳಿಗೆ ‘ಸಾಧಕ ಪ್ರಶಸ್ತಿ’ ಪ್ರದಾನ ಮಾಡಿ ಅಭಿನಂದಿಸಿದರು.

ಭಜನೆ ಮಾಡುವಾಗ ಪರಿಶುದ್ಧ ತನು, ಮನದಿಂದ ದೃಢಸಂಕಲ್ಪದೊಂದಿಗೆ ಯಾವುದೇ ರೀತಿಯ ಚಿಂತೆ, ಸಂಕೋಚ ಇಲ್ಲದೆ ಭಕ್ತಿ ಹಾಗೂ ಉತ್ಸಾಹದಿಂದ ಮಾಡಬೇಕು ಎಂದು ಅವರು ಸಲಹೆ ನೀಡಿದರು.


ಎಲ್ಲಾ ಭಜನಾ ಮಂಡಳಿಗಳ ಸೇವಾ ಕಳಕಳಿ ಮತ್ತು ಬದ್ಧತೆಯನ್ನು ಶ್ಲಾಘಿಸಿದ ಅವರು ಹಿಂದೆ ಎಲ್ಲಾ ಕಡೆಗಳಲ್ಲಿ ‘ಜನ ಮರುಳೋ, ಜಾತ್ರೆ ಮರುಳೋ’ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಈಗ ಎಲ್ಲೆಡೆ ಭಜನಾ ಮಂಡಳಿಗಳಿಂದಾಗಿ ಎಲ್ಲಾ ಊರುಗಳಲ್ಲಿ ನಡೆಯುವ ಜಾತ್ರೆ, ಉತ್ಸವ, ಸಭೆ-ಸಮಾರಂಭ, ಹಬ್ಬ ಹರಿದಿನಗಳಲ್ಲಿ ಶಿಸ್ತು, ಸಂಯಮ, ಸ್ವಚ್ಛತೆ, ಬದ್ಧತೆ ಹಾಗೂ ಸೇವಾ ಕಳಕಳಿ ಕಂಡುಬರುತ್ತಿರುವುದು ನಮಗೆ ಹೆಚ್ಚಿನ ಸಂತೋಷ ಮತ್ತು ತೃಪ್ತಿ ನೀಡಿದೆ ಎಂದು ಹೆಗ್ಗಡೆಯವರು ಅಭಿಪ್ರಾಯ ವ್ಯಕ್ತಪಡಿಸಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.

ವಿಶೇಷವಾಗಿ ಭಜನೆಯಲ್ಲಿ ಪುಟ್ಟಮಕ್ಕಳ ಪ್ರತಿಭೆ, ಆಸಕ್ತಿ ಮತ್ತು ಉತ್ಸಾಹವನ್ನು ಅವರು ಶ್ಲಾಘಿಸಿದರು.

ಭಜನಾ ಪರಿಷತ್‌ನ ಅಧ್ಯಕ್ಷರಾದ ಚಂದ್ರಶೇಖರ ಸಾಲಿಯಾನ್ ಮತ್ತು ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಹಾಗೂ ಎಲ್ಲಾ ಪದಾಧಿಕಾರಿಗಳ ಸೇವೆಯನ್ನು ಹೆಗ್ಗಡೆಯವರು ಶ್ಲಾಘಿಸಿದರು.

ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಮಾಣಿಲದ ಮೋಹನದಾಸ ಸ್ವಾಮೀಜಿ ಮತ್ತು ಭಜನಾ ಪರಿಷತ್‌ನ ಅಧ್ಯಕ್ಷರಾದ ಚಂದ್ರಶೇಖರ ಸಾಲಿಯಾನ್ ಇದ್ದರು.

ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಭಜನಾ ಮಂಡಳಿಗಳ ಸೇವೆ, ಸಾಧನೆಯನ್ನು ಸಾದರಪಡಿಸಿದರು.

ಭಜನಾ ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ಸ್ವಾಗತಿಸಿ ಭಜನಾ ಪರಿಷತ್‌ನ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ವಂದಿಸಿದರು. ವಕೀಲ ಕೇಶವ ಗೌಡ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article