
ಯಕ್ಷಗಾನ ವೇಷ ಹಾಕಿ ಭಿಕ್ಷಾಟನೆ ದಂಧೆ ತಡೆಯುವಂತೆ ಮನವಿ
ಮಂಗಳೂರು: ಯಕ್ಷಗಾನ ವೇಷಭೂಷಣ ಮಾಡಿಕೊಂಡು ಭಿಕ್ಷಾಟನೆ ಮಾಡಿ ಯಕ್ಷಗಾನ ಕಲೆಗೆ ಅಪಚಾರ ಆಗುತ್ತಿದ್ದು, ಈ ದಂಧೆಯನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧೀಕ್ಷಕರಿಗೆ ದ.ಕ. ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟ ಮನವಿ ಸಲ್ಲಿಸಿದೆ.
ನಮ್ಮ ಸನಾತನ ಆರಾಧನಾ ಕಲೆಯಾದ ಯಕ್ಷಗಾನ ವಿಶ್ವವ್ಯಾಪಿ ಪ್ರಚಲಿತದಲ್ಲಿದ್ದು, ಪ್ರಸ್ತುತ ಈ ಶ್ರೇಷ್ಠ ಕಲೆಗೆ ವಿಶ್ವ ಮನ್ನಣೆ ಸಿಗುತ್ತಿದೆ. ಆದರೆ ನಮ್ಮ ಕರಾವಳಿ ಭಾಗದಲ್ಲಿ ಯಕ್ಷ್ಷಗಾನ ಕಲೆಗೆ ಅಪಚಾರ ಆಗುತ್ತಿರುವುದನ್ನು ನೋಡಿ ಬೇಸರವಾಗುತ್ತಿದೆ.
ಹಿಂದೂ ಧಾರ್ಮಿಕ ಹಬ್ಬಗಳಾದ ಶ್ರೀ ಕೃಷ್ಣಾಷ್ಟಮಿ, ಗಣೇಶೋತ್ಸವ, ನವರಾತ್ರಿ ಸಂದರ್ಭಗಳಲ್ಲಿ ಯಕ್ಷ ವೇಷಭೂಷಣ ಧಾರಣೆ ಮಾಡಿಕೊಂಡು ಹಗಲಿಡೀ ಭಿಕ್ಷಾಟನೆ ಮಾಡುವುದು ಅದೂ ಅಸಹ್ಯಕರವಾಗಿ ಯಕ್ಷಗಾನಕ್ಕಾಗಿ ಅನೇಕ ವರುಷಗಳಿಂದ ದುಡಿಯುತ್ತಿರುವನನ್ನಂತಹ ಅನೇಕ ವ್ಯಕ್ತಿಗಳಿಗೆ ತುಂಬಾ ಬೇಸರ ತರಿಸಿದೆ. ಇನ್ನು ಮುಂದಕ್ಕೆ ತಮ್ಮ ವ್ಯಾಪ್ತಿಯಲ್ಲಿ ಯಕ್ಷಗಾನದ ಗೆಜ್ಜೆಕಟ್ಟಿ ಮುಖಕ್ಕೆ ಬಣ್ಣ ಬಳಿದು ಯಕ್ಷಗಾನದ ವೇಷಭೂಷಣ ತೊಟ್ಟುಕೊಂಡು ಬೀದಿ ಬೀದಿ ಅಲೆದಾಡಿಕೊಂಡು ಭಿಕ್ಷಾಟನೆ ಮಾಡುವುದನ್ನು ನಿಷೇಧಿಸುವಂತೆ ದ.ಕ. ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಮನವಿ ಮಾಡಿದ್ದಾರೆ.