
ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಪೊಲೀಸ್ ಇಲಾಖೆಗೆ 2 ಸ್ಕಾರ್ಫಿಯೋಗಳ ಹಸ್ತಾಂತರ
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಹಾಗೂ ನಬಾರ್ಡ್ ಸಂಸ್ಥೆಯ ಸಿಜಿಎಂ ನರೇಂದ್ರ ಬಾಬು ಈ ಸ್ಕಾರ್ಫಿಯೋ ವಾಹನಗಳನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿಯವರಿಗೆ ಹಸ್ತಾಂತರಿಸಿದರು.
ವಾಹನಗಳ ಹಸ್ತಾಂತರಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಮೊಬಿಲಿಟಿಗೆ ಎರಡು ವಾಹನಗಳ ಅಗತ್ಯವಿದೆ ಎಂಬ ಬಗ್ಗೆ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಮನವಿ ಮಾಡಿದ್ದೆವು. ತಕ್ಷಣ ಸ್ಪಂದಿಸಿದ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಎರಡು ಸ್ಕಾರ್ಫಿಯೋ ವಾಹನಗಳನ್ನು ನೀಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಹೇಳಿದರು.
ಈ ವಾಹನವು ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಮೊಬಿಲಿಟಿಯಾಗಿ ಬಳಕೆಯಾಗಲಿದ್ದು, 112ಗೆ ಯಾರೇ ಕರೆ ಮಾಡಿದರೂ ನಗರ ಪ್ರದೇಶದಲ್ಲಿ 6-7 ನಿಮಿಷದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 15-20 ನಿಮಿಷದಲ್ಲಿ ಅವರಿಗೆ ನೆವಾಗುತ್ತಿದ್ದೇವೆ. ಈ ವಾಹನಗಳನ್ನು ಎಸ್‌ಸಿಡಿಸಿಸಿ ಬ್ಯಾಂಕ್ ನೀಡಿದ್ದು, ಸಾಮಾಜಿಕ್ಕೆ ಕರ್ತವ್ಯವನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.
ನಬಾರ್ಡ್ ಸಂಸ್ಥೆಯ ಸಿಜಿಎಂ ಸುರೇಂದ್ರ ಬಾಬು ಮಾತನಾಡಿ, ಇಡೀ ದೇಶದಲ್ಲಿ ಸುಮಾರು 300ಕ್ಕೂ ಅಧಿಕ ಡಿಸಿಸಿ ಬ್ಯಾಂಕ್‌ಗಳಿವೆ. ಆದರೆ ಕರ್ನಾಟಕದ ಕರಾವಳಿಯ ಎಸ್‌ಸಿಡಿಸಿಸಿ ಬ್ಯಾಂಕ್‌ನ ಕಾರ್ಯದಕ್ಷತೆ ಎಲ್ಲರಿಗೂ ಮಾದರಿ. ಇಂದು ಪೊಲೀಸ್ ಇಲಾಖೆಗೆ ಎರಡು ಸ್ಕಾರ್ಫಿಯೋ ವಾಹನಗಳನ್ನು ಹಸ್ತಾಂತರಿಸುವ ಮೂಲಕ ಮತ್ತೆ ತನ್ನ ಕಾರ್ಯಕ್ಷಮತೆಯನ್ನು ದೃಢಪಡಿಸಿದೆ. ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನಿಜವಾಗಲೂ ಅಭಿನಂದನೀಯರು ಎಂದು ಹೇಳಿದರು
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಸಹಕಾರಿ ಬ್ಯಾಂಕುಗಳು ಜನರೊಂದಿಗೆ ಬೆರೆತು, ಅವರಿಗೆ ಬೇಕಾದ ಸವಲತ್ತುಗಳನ್ನು ನೀಡಿ ಜನರ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ. ಗಡಿಭಾಗದಲ್ಲಿ ದೇಶದ ರಕ್ಷಣೆಗೆ ಸೈನಿಕರು ಇರುತ್ತಾರೆ. ಆದರೆ ದೇಶದೊಳಗಡೆ ನಾಗರಿಕರ ರಕ್ಷಣೆಯನ್ನು ಪೊಲೀಸರು ಮಾಡುತ್ತಾರೆ. ಇಂತಹ ಪೊಲೀಸರ ಕರ್ತವ್ಯಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಈ ಎರಡು ವಾಹನಗಳನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ್ದೇವೆ ಎಂದು ಹೇಳಿದರು.
ಡಿಸಿಪಿಗಳಾದ ಮಿಥುನ್ ಹೆಚ್.ಎನ್., ರವಿಶಂಕರ್, ಉಮೇಶ್, ಬ್ಯಾಂಕಿನ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಬ್ಯಾಂಕಿನ ನಿರ್ದೇಶಕರುಗಳು, ಎಸಿಪಿಗಳು, ಪೊಲೀಸ್ ಅಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.