ನಾಳೆ 27ನೇ ವರ್ಷದ ಭಜನಾ ಕಮ್ಮಟ ಸಮಾರೋಪ, ಭಜನೋತ್ಸವ

ನಾಳೆ 27ನೇ ವರ್ಷದ ಭಜನಾ ಕಮ್ಮಟ ಸಮಾರೋಪ, ಭಜನೋತ್ಸವ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಸೆ.14 ರಂದು ಪ್ರಾರಂಭಗೊಂಡ 27ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭ ಮತ್ತು ಭಜನೋತ್ಸವವು ಸೆ.21 ರಂದು ಬೆಳಗ್ಗೆ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ.

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮತ್ತು ಡಾ. ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಸಂಯೋಜನೆಯಲ್ಲಿ 27ನೇ ವರ್ಷದ ಭಜನಾ ಕಮ್ಮಟ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಈ ಬಾರಿ ಭಜನಾ ಕಮ್ಮಟದಲ್ಲಿ 182 ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ. 111 ಪುರುಷರು ಹಾಗೂ 71 ಮಹಿಳೆಯರು ಭಾಗವಹಿಸುತ್ತಿದ್ದು, 19 ತಾಲೂಕುಗಳ ಭಜನಾ ಮಂದಿರಗಳ 1750 ಮಂದಿಗೆ ಕಮ್ಮಟ ನಡೆಸಿದ್ದು ಅವರಿಂದ ಆಯ್ದ 182 ಮಂದಿ ಶಿಬಿರಾರ್ಥಿಗಳಾಗಿ  ಭಾಗವಹಿಸಿದ್ದಾರೆ. 

ಸೆ.21 ರಂದು ನಡೆಯಲಿರುವ ಸಮಾರೋಪ ಸಮಾರಂಭ ಹಾಗೂ ಭಜನೋತ್ಸವದಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಯ ಆಯ್ದ 400 ಭಜನಾ ತಂಡಗಳ ಸುಮಾರು 5000 ಭಜನಾ ಪಟುಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ನೃತ್ಯ ಭಜನೆ ನಡೆಸಲಿದ್ದಾರೆ.

ಒಂದು ವಾರ ಕಾಲ ನಡೆದ ಭಜನಾ ಕಮ್ಮಟದಲ್ಲಿ ಶಿಬಿರಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಗಾಯಕರಾದ ಶಂಕರ ಶಾನಭಾಗ್, ಅರ್ಚನಾ ಉಡುಪ, ರಾಮಕೃಷ್ಣ ಕಾಟುಕುಕ್ಕೆ, ಉಷಾ ಹೆಬ್ಬಾರ್ ಮಣಿಪಾಲ, ಸೌಮ್ಯ ಸುಭಾಷ್ ಧರ್ಮಸ್ಥಳ, ಮಂಗಲದಾಸ್ ಗುಲ್ವಾಡಿ, ವಿದುಷಿ ಚೈತ್ರಾ ಉಜಿರೆ, ಸುನಿಲ್ ಶೆಟ್ಟಿ ಧರ್ಮಸ್ಥಳ ಮೊದಲಾದವರು ಮಾಹಿತಿ, ಮಾರ್ಗದರ್ಶನ ನೀಡಿದ್ದಾರೆ. ಪ್ರತಿ ಮಧ್ಯಾಹ್ನ ವಿದ್ವಾಂಸರಿಂದ ಧಾರ್ಮಿಕ ಉಪನ್ಯಾಸ, ಸಂಜೆ ನಗರ ಭಜನೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ನಡೆಯುತ್ತಿರುವ ಭಜನಾ ಕಮ್ಮಟದಲ್ಲಿ ಕಳೆದ 26 ವರ್ಷಗಳಲ್ಲಿ 5800 ಭಜನಾ ಪಟುಗಳಿಗೆ ತರಬೇತಿ ನೀಡಲಾಗಿದೆ. 26 ಕಮ್ಮಟಗಳಲ್ಲಿ 240 ಹಾಡುಗಳಿಗೆ ಅಭ್ಯಾಸ ನಡೆಸಿ, 2000 ಮಂದಿಗೆ ಕುಣಿತ ಭಜನೆ ಕಲಿಸಿಕೊಡಲಾಗಿದೆ. ತನ್ಮೂಲಕ ರಾಜ್ಯಾದ್ಯಂತ 5500 ಭಜನಾ ಮಂಡಳಿಗಳು ಕ್ಷೇತ್ರದ ಭಜನಾ ಕಮ್ಮಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ ಎಂದು ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ತಿಳಿಸಿದ್ದಾರೆ.

ಸಮಾರೋಪ ಸಮಾರಂಭ: 

ಸೆ.21ರಂದು ಬೆಳಗ್ಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. 

ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನದ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಜಿ ದಿವ್ಯ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ.ಬೃಜೇಶ್ ಚೌಟ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿ.ಪ. ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಭಜನಾ ಪರಿಷತ್ ಉಪಾಧ್ಯಕ್ಷೆ ಡಾ. ಹೇಮಾವತಿ ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್ ಭಾಗವಹಿಸಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article