
ವ್ಯಸನವೆಂಬ ಅಜ್ಞಾನದಿಂದ ನವಜೀವನವೆಂಬ ಸುಜ್ಞಾನದೆಡೆಗೆ: ವೀರೇಂದ್ರ ಹೆಗ್ಗಡೆ
ಅವರು ಉಜಿರೆ ಲಾಲದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 256ನೇ ವಿಶೇಷ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮದ್ಯಪಾನ ಮಾಡುವುದರಿಂದ ಆರೋಗ್ಯ, ವೈಯಕ್ತಿಕ ನಡವಳಿಕೆ, ಆರ್ಥಿಕ ಸ್ಥಿತಿಗತಿ, ಸಮಾಜದಲ್ಲಿ ಅಗೌರವ, ಕುಟುಂಬದಲ್ಲಿ ನೆಮ್ಮದಿ ಹಾಳಾಗುತ್ತದೆ. ವ್ಯಸನಿಗಳು ನಿಗ್ರಹ ಶಕ್ತಿಯನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಪರಿಪೂರ್ಣ ಮನಪರಿವರ್ತನೆಯಿಂದ ದುಶ್ಚಟಮುಕ್ತರಾಗಲು ಸಾಧ್ಯವೆಂದು ಜನಜಾಗೃತಿ ವೇದಿಕೆಯ ಮೂಲಕ ನಡೆಸಲ್ಪಡುವ ಮದ್ಯವರ್ಜನ ಶಿಬಿರಗಳು ಸಾಬೀತುಪಡಿಸಿವೆ. ಆದುದರಿಂದ ಮುಂದಿನ ದಿನಗಳಲ್ಲಿ ಧೈರ್ಯದಿಂದ ಕುಡಿತ ಬಿಡುವ ದೃಢ ಹೆಜ್ಜೆಯನ್ನು ಹಾಕಬೇಕು ಎಂದರು.
ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಮತ್ತು ಸುದರ್ಶನ್, ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ವಿವೇಕ್ ವಿ. ಪಾಯ್ಸ್, ಹಾಗೂ ನವಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಶಿಬಿರದಲ್ಲಿ ರಾಜ್ಯದ ವಿವಿಧ ಕಡೆಗಳಿಂದ 64 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಶಿಬಿರದಲ್ಲಿ ಎಂದಿನಂತೆ ಯೋಗ, ಧ್ಯಾನ, ವ್ಯಾಯಾಮ, ಅನಿಸಿಕೆ, ಆತ್ಮಾವಲೋಕನ, ಗುಂಪು ಚರ್ಚೆ, ಸಲಹೆ ಮತ್ತು ವೈದ್ಯಕೀಯ ಚಿಕಿತ್ಸೆ, ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಮನಪರಿವರ್ತನೆಗೆ ಅವಕಾಶ ಮಾಡಿಕೊಡಲಾಗಿದೆ.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ಜಯಾನಂದ, ಆಪ್ತ ಸಮಾಲೋಚಕ ಜಿ.ಆರ್. ಮಧು, ಆರೋಗ್ಯ ಸಹಾಯಕಿ ಪ್ರಭ, ಜಾಗೃತಿ ಸೌಧದ ಪ್ರಬಂಧಕ ಕಿಶೋರ್ ಸಹಕರಿಸಿರುತ್ತಾರೆ.
ಮುಂದಿನ ವಿಶೇಷ ಶಿಬಿರವು ಅ.6 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.