ಬಂಟ್ವಾಳದಲ್ಲಿ 4830 ಬಿಪಿಎಲ್ ಕಾರ್ಡ್ ರದ್ದತಿಗೆ ಪಟ್ಟಿ ಸಿದ್ದ: ಸರಕಾರದ ನಡೆ ಖಂಡನೀಯ
ಬಂಟ್ವಾಳ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಲು ಕರ್ನಾಟಕ ರಾಜ್ಯ ಸರಕಾರದಲ್ಲಿ ಹಣಕಾಸಿನ ಕೊರತೆ ತಲೆದೋರಿದ್ದು ಯೋಜನೆ ಕಾರ್ಯಗತಕ್ಕಾಗಿ ಹಣಕಾಸು ನೆರವಿಗೋಸ್ಕರ ಬಡವರ ಬಿಪಿಎಲ್ ಪಡಿತರ ಚೀಟಿಗಳ ಮೇಲೆ ರಾಜ್ಯ ಸರಕಾರ ಕಣ್ಣು ಹಾಕಿದೆ. ವಿವಿಧ ಕಾರಣಗಳನ್ನು ನೀಡಿ ಬಂಟ್ವಾಳದಲ್ಲಿ 4830 ಸೇರಿದಂತೆ ಪ್ರತಿ ತಾಲೂಕಿನಾದ್ಯಂತ ಸಾವಿರಾರು ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲು ಹೊರಟಿರುವ ರಾಜ್ಯ ಸರಕಾರದ ನಡೆಯನ್ನು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ತೀವ್ರವಾಗಿ ಖಂಡಿಸಿದ್ದಾರೆ.
ಹಲವಾರು ಮಂದಿ ಬಿಪಿಎಲ್ ಪಡಿತರ ಕಾರ್ಡ್‌ದಾರರು ತಮ್ಮ ವಾಸ್ತವದ ಮನೆ ನಿರ್ಮಾಣಕ್ಕಾಗಿ ಬ್ಯಾಂಕ್‌ಗಳಿಂದ ಸಾಲ ಪಡೆಯುವ ಉದ್ದೇಶಕ್ಕಾಗಿ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿಕೊಂಡು ಸಾಲ ಪಡೆದು ಮನೆ ನಿರ್ಮಿಸಿಕೊಂಡು ವಾಸ್ತವ ವಾಗುವ ಸಮಯದಲ್ಲಿ ಕೇವಲ ಐಟಿ ರಿಟರ್ನ್ ಮಾಡಿದ ಉದ್ದೇಶವನ್ನಿಟ್ಟುಕೊಂಡು ಆದಾಯ ಹೆಚ್ಚಳವಾಗಿದೆ ಎಂಬ ಕಾರಣಕ್ಕೆ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ರದ್ದು ಮಾಡಲು ಹೊರಟಿರುವುದು ಅಸಂಬದ್ಧವಾಗಿದೆ. ಇದು ಸರಿಯಾದ ಕ್ರಮವಲ್ಲ? ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಸಮಗ್ರವಾಗಿ ಪರಿಶೀಲನೆ ಮಾಡಿಯೇ ರದ್ದು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ಅಧಿಕಾರಿಗಳಲ್ಲಿ ವಿನಂತಿಸಿರುವ ಅವರು ಬಂಟ್ವಾಳದಲ್ಲಿಯೇ ಸುಮಾರು 4830 ಬಿಪಿಎಲ್ ಪಡಿತರ ಕಾರ್ಡ್‌ಗಳು ರದ್ದುಗೊಳ್ಳುವ ಪಟ್ಟಿಯಲ್ಲಿದ್ದು, ಸುಮಾರು 500 ರಷ್ಟು ಬಿಪಿಎಲ್ ಕಾರ್ಡ್‌ಗಳು ಈಗಾಗಲೇ ರದ್ದು ಗೊಂಡಿರುತ್ತವೆ ಎಂದು ತಿಳಿದುಬಂದಿದೆ.
ಈ ರೀತಿಯಲ್ಲಿ ಬಿಪಿಎಲ್ ಪಡಿತರ ಕಾರ್ಡ್‌ಗಳು ರದ್ದುಗೊಳ್ಳುವುದರಿಂದ ಸರಕಾರದಿಂದ ಸಿಗುವಂತಹ ವಿವಿಧ ಯೋಜನೆಗಳು ಮತ್ತು ಸವಲತ್ತುಗಳಿಂದ ಸಾವಿರಾರು ಕುಟುಂಬಗಳು ವಂಚಿತವಾಗಲಿವೆ. ಈ ನಿಟ್ಟಿನಲ್ಲಿ ಈಗಾಗಲೇ ರದ್ದತಿಗೆ ಗುರುತಿಸಿರುವ ಬಿಪಿಎಲ್ ಕಾರ್ಡ್‌ಗಳನ್ನು ಐಟಿ ರಿಟರ್ನ್ ಫೈಲ್ ಕಾರಣದಿಂದ ವಿನಾಯಿತಿ ನೀಡಿ ಯಥಾ ಸ್ಥಿತಿಯಲ್ಲಿ ಬಿಪಿಎಲ್ ಕಾರ್ಡ್‌ಗಳು ಮುಂದುವರೆಸಲು ಸರಕಾರವನ್ನು ಅವರು ಒತ್ತಾಯಿಸಿದ್ದಾರೆ.