ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 10 ವರ್ಷಗಳಲ್ಲಿ ಪ.ಜಾತಿ, ಪ.ಪಂಗಡದ ಮೇಲಿನ ದೌರ್ಜನ್ಯ ಕಾಯ್ದೆಯಡಿ 151 ಪ್ರಕರಣ ದಾಖಲು
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರವಿವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾಸಿಕ ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಘಟನಾ ಕಾರ್ಯದರ್ಶಿ ಎಂ.ದೇವದಾಸ ಅವರು ತಮಗೆ ಮಾಹಿತಿ ಹಕ್ಕು ಅಧಿನಿಯಮದಡಿ ದೊರೆತ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ಕಾಯ್ದೆಯಡಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಕರಣ ಗಳು ದಾಖಲಾಗಿದ್ದರೂ ಅವರಿಗೆ ಶಿಕ್ಷೆ ಆಗದಿರುವುದು ದುರದೃಷ್ಟಕರ. ಈ ರೀತಿ ಶಿಕ್ಷೆಯಿಂದ ಪಾರಾಗುವುದರಿಂದ ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆಸುವವರಿಗೆ ಈ ಕಾನೂನಿಂದ ಏನು ಆಗುವುದಿಲ್ಲ ಎಂದು ಮತ್ತಷ್ಟು ದೌರ್ಜನ್ಯ ನಡೆಸಲು ಅವಕಾಶ ನೀಡಿದಂತಾಗುತ್ತದೆ. ಈ ಕಾರಣದಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ದೌರ್ಜನ್ಯ ನಡೆಸುವ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಗಮನ ಹರಿಸಬೇಕು. ದೌರ್ಜನ್ಯ ತಡೆ ಕಾಯ್ದೆಯ ಬಗ್ಗೆ ದಲಿತ ಮುಖಂಡರಿಗೆ ಮಾಹಿತಿ ಕಾರ್ಯಾಗಾರ ನೀಡುವ ನಿಟ್ಟಿನಲ್ಲಿ ತಾವು ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ದೌರ್ಜನ್ಯಕ್ಕೊಳಗಾದವರಿಗೆ ಧೈರ್ಯ ತುಂಬುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಬೇಕು ಎಂದು ದಲಿತ ಮುಖಂಡ ಎಸ್.ಪಿ. ಆನಂದ ಒತ್ತಾಯಿಸಿದರು.
ದೌರ್ಜನ್ಯಕ್ಕೊಳಗಾದವರ ಪರ ಸರಿಯಾದ ಸಾಕ್ಷ್ಯಾಧಾರಗಳು ಇಲ್ಲದ ಕಾರಣದಿಂದಾಗಿ ಪ್ರಕರಣಗಳು ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತದೆ. ದೌರ್ಜನ್ಯಕ್ಕೊಳಗಾದವರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ದಲಿತ ಸಂಘಟನೆಗಳು ಗಮನಹರಿಸಬೇಕು ಎಂದು ಡಿಸಿಪಿ ರವಿಶಂಕರ್ ಸಲಹೆ ನೀಡಿದರು.
ಪರಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕಾನೂನು ಮಾಹಿತಿ ಮತ್ತು ಸರಕಾರದ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡದವರಿಗೆ ಲಭ್ಯವಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಗಾರವನ್ನು ಆಯೋಜಿಸಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ಉಪ ಆಯುಕ್ತ ಮಿಥುನ್ ಎನ್ ಸಭೆಗೆ ತಿಳಿಸಿದರು.
ನಮಗೆ ವಾಮಂಜೂರು ಪೊಲೀಸ್ ಠಾಣೆ ಬೇಡ: ಅಮಲಜ್ಯೋತಿ ಮಾತನಾಡಿ ನಮಗೆ ವಾಮಂಜೂರು ಪೊಲೀಸ್ ಠಾಣೆಗೆ ಹೋಗಲು ಕಷ್ಟವಾಗುತ್ತದೆ. ಹಿಂದಿನಂತೆ ನಮ್ಮ ಊರನ್ನು ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿಸ ಬೇಕು ಎಂದು ಆಗ್ರಹಿಸಿದರು.
ಪೊಲೀಸ್ ಠಾಣೆಗಳ ವ್ಯಾಪ್ತಿ ಬದಲಾದ ಕಾರಣ ಕೆಲವು ಕಡೆ ಸಮಸ್ಯೆ ಆಗಿರುವುದು ನಿಜ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಎಸಿಪಿಗಳು ಗಮನ ಹರಿಸುವಂತೆ ಡಿಸಿಪಿ ಮಿಥುನ್ ಎನ್. ಸಲಹೆ ನೀಡಿದರು.
ಕೆಂಪು ಕಲ್ಲಿಗೆ ಸರಿಯಾದ ದರ ನಿಗದಿಪಡಿಸಬೇಕು: ಐದು ತಿಂಗಳಿಂದ ಮರಳು ಮತ್ತು ಕೆಂಪುಕಲ್ಲು ಸಮಸ್ಯೆ ಯಿಂದಾಗಿ ದ.ಕ. ಜಿಲ್ಲೆಯಲ್ಲಿ ಮನೆಕಟ್ಟುವರರಿಗೆ ಸಮಸ್ಯೆ ಆಗಿದೆ ಮತ್ತು ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಕೆಂಪು ಕಲ್ಲು ದರ ಏರಿಕೆಯಿಂದಾಗಿ ಜನಸಾಮಾನ್ಯರು ತೊಂದರೆಗೊಳಗಾಗಿದ್ದಾರೆ. ಹಿಂದೆ 28 ರೂ.ಗೆ ಸಿಗುತ್ತಿದ್ದ ಕಲ್ಲು ಈಗ ಕೆಲವು ಕಡೆ ಕೆಂಪು ಕಲ್ಲು 70 ರೂ.ಗೆ ತನಕ ಮುಟ್ಟಿದೆ. ಆದ ಕಾರಣ ಕೆಂಪುಕಲ್ಲಿಗೆ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಬೇಕು. ದರ ಕಡಿಮೆ ಮಾಡಲು ನಮಗೆ ಸಾಧ್ಯವಿಲ್ಲ. ಮುಂದೆ ಸಮಿತಿಯ ಸಭೆಯಲ್ಲಿ ದರ ನಿಗದಿಯ ವಿಚಾರದ ಗಮನ ಸೆಳೆಯಲಾಗುವುದು ಎಮದು ಗಮನ ಸೆಳೆದರು.
ಬಳ್ಕುಂಜೆ ಗ್ರಾಮದಲ್ಲಿ ಅಸ್ಪ್ಪಶ್ಯತೆ ಇಲ್ಲ: ಡಿಸಿಪಿ ಸ್ಪಷ್ಟನೆ:
ಬಳ್ಕುಂಜೆ ಗ್ರಾಮದಲ್ಲಿ ಅಸ್ಪಶ್ಯತೆ ಇದೆ. ಮೇಲ್ಜಾತಿಯವರ ಬಾವಿಯಿಂದ ಕೆಳಜಾತಿಯವರಿಗೆ ನೀರು ಸೇದುವುದಕ್ಕೆ ಹಗ್ಗ ಮುಟ್ಟಲು ಅವಕಾಶವಿಲ್ಲ ಎಂಬ ಬಗ್ಗೆ ಕಳೆದ ಸಭೆಯಲ್ಲಿ ದಲಿತ ಮುಖಂಡರೊಬ್ಬರು ಮಾಡಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಡಿಸಿಪಿ ಮಿಥುನ್ ಅವರು ಬಳ್ಕುಂಜೆ ಗ್ರಾಮದಲ್ಲಿ ಅಸ್ಪಶ್ಯತೆ ಇಲ್ಲ. ಗ್ರಾಮ ಪಂಚಾಯತ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಪೊಲೀಸ್ ಅಧಿಕಾರಿಗಳು ಕೂಡಾ ಅಲ್ಲಿಗೆ ಭೇಟಿ ನೀಡಿ ಗ್ರಾಮಸ್ಥರ ಅಭಿಪ್ರಾಯ ಕೇಳಿದ್ದಾರೆ ಎಂದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ನಾಗರಿಕ ಜಾಗೃತ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಕುಮಾರ್ ಅವರು ಮಾತನಾಡಿ ಡಿಸಿ ಮನ್ನಾ ಲ್ಯಾಂಡ್‌ನ್ನು ದ.ಕ. ಜಿಲ್ಲೆಯ ಹಲವಡೆ ಅರಣ್ಯ ಇಲಾಖೆಯವರು ಅನಧಿಕೃತವಾಗಿ ವಶಪಡಿಸಿಕೊಂಡಿ ದ್ದಾರೆ. ಇದರಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರಿಗೆ ತೊಂದರೆಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದರು.
ಕಳೆದ ಸಭೆಯಲ್ಲಿ ಪ್ರಸ್ತಾವಗೊಂಡಿದ್ದ ಬಳ್ಕುಂಜೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಅಂಬೇಡ್ಕರ್ ಫೋಟೊ ಇಲ್ಲ ಎಂಬ ದೂರಿನ ಬಗ್ಗೆ ಮಾಹಿತಿ ಪಡೆಯಲು ಠಾಣಾ ಪೊಲೀಸ್ ನಿರೀಕ್ಷಕರೊಂದಿಗೆ ಉತ್ತರ ಉಪವಿಭಾಗದ ಡಿಸಿಪಿ ಭೇಟಿ ನೀಡಿದ್ದಾರೆ.ಅಂಬೇಡ್ಕರ್ ಅವರ ಹಳೆಯ ಫೋಟೊ ಡ್ಯಾಮೇಜ್ ಆಗಿರುವುದರಿಂದ ಅದನ್ನು ತೆಗೆದು ಹೊಸ ಫೋಟೊ ಅಳವಡಿಸಿರುವ ಮಾಹಿತಿ ಗ್ರಾಮ ಪಂಚಾಯತ್ ನೀಡಿದೆ .
ಬಳ್ಕುಂಜೆ ಗಾ.ಪಂ ವ್ಯಾಪ್ತಿಯ ಕವತ್ತಾರು ಗ್ರಾಮದ ಶಾಂತ ಎಂಬವರ ತಾಯಿ ಗಿರಿಜಾರ ಮನೆ ದುರಸ್ತಿಗೆ ಗ್ರಾ.ಪಂ ನಿಂದ ತಾತ್ಕಾಲಿಕವಾಗಿ ಕಂದಾಯ ಇಲಾಖೆಯಿಂದ 6 ಸಾವಿರ ರೂ. ಮಂಜೂರಾಗಿದೆ. ಮನೆ ರಿಪೇರಿ ಕಾಮಗಾರಿಯ ವೆಚ್ಚವನ್ನು ಗ್ರಾಮ ಪಂಚಾಯತ್ ಭರಿಸಲಿದೆ ಎಂದು ಪಾಲನಾ ವರದಿ ವಾಚಿಸಿದ ದಕ್ಷಿಣ ಉಪವಿಭಾಗದ ಎಸಿಪಿ ವಿಜಯಕ್ರಾಂತಿ ಸಭೆಗೆ ತಿಳಿಸಿದರು.
ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್, ಸಂಚಾರ ಉಪವಿಭಾಗದ ಡಿಸಿಪಿ ನಜ್ಮಾ ಫಾರೂಕಿ ಉಪಸ್ಥಿತರಿದ್ದರು.