ಈಶ್ವರಮಂಗಲದಲ್ಲಿ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ: ತನಿಖೆಗೆ ಎಸ್‌ಡಿಪಿಐ ಆಗ್ರಹ
ಪುತ್ತೂರು: ಪುತ್ತೂರಿನ ಈಶ್ವರಮಂಗಲದಲ್ಲಿ ಅಕ್ಟೋಬರ್ 22 ರಂದು ನಡೆದ ಗೋ ಸಾಗಾಟಗಾರನ ಮೇಲೆ ನಡೆದಿರುವ ಶೂಟೌಟ್ ಪ್ರಕರಣವು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಪ್ರಕರಣವನ್ನು ಉನ್ನತಾಧಿಕಾರಿಗಳಿಂದ ಅಥವಾ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಎಸ್‌ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಒತ್ತಾಯಿಸಿದ್ದಾರೆ.
ಅವರು ಶನಿವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಅಕ್ರಮ ಗೋ ಸಾಗಾಟ ಮಾಡುವುದು ಗುಂಡೇಟು ಹಾಕುವಷ್ಟು ದೊಡ್ಡ ಪ್ರಕರಣವೇ?. ಗೋವುಗಳ ಸಾಗಾಟಕ್ಕೆ ಅನುಮತಿ ಇಲ್ಲದಿದ್ದಲ್ಲಿ ಪೊಲೀಸರು ವಾಹನ ಜಪ್ತಿ ಮಾಡಿ ಅವರ ಮೇಲೆ ಪ್ರಕರಣ ದಾಖಲಿಸಬೇಕಿತ್ತು. ಇಲ್ಲಿ ವಾಹನ, ಜಾನುವಾರು ರಿಕವರಿ ಆಗಿದೆ. ಆ ಆಧಾರದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಸಾಕಷ್ಟು ಅವಕಾಶವಿದ್ದರೂ ಶೂಟೌಟ್ ಮಾಡುವ ಅಗತ್ಯವೇನಿತ್ತು ಎಂಬುದು ಸಂಶಯಾಸ್ಪದವಾಗಿದೆ. ಲಾರಿ ಚಾಲಕನಾದ ಆರೋಪಿ ಪೊಲೀಸರಿಗೆ ಕತ್ತಿ ತೋರಿಸಿ ಬೆದರಿಸಿದ್ದ ಎಂಬ ಪೊಲೀಸರ ಹೇಳಿಕೆಯು ನಂಬಲಾರ್ಹ ವಿಷಯವಲ್ಲ. ಅಲ್ಲದೆ ಪೊಲೀಸ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿರುವುದು ಕಂಡು ಬರುವುದಿಲ್ಲ. ಪ್ರಕರಣದಲ್ಲಿ ನಿಗೂಢತೆ ಕಂಡು ಬರುತ್ತಿದೆ. ಸ್ಥಳೀಯ ಪೊಲೀಸರು ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುವುದರ ಜೊತೆಗೆ ಒಟ್ಟು ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ.
ಬೆಳಿಗ್ಗೆ ಐದೂವರೆ ಗಂಟೆಗೆ ಪ್ರಕರಣ ನಡೆದಿದ್ದರೂ ೯ ಗಂಟೆಯ ತನಕ ವಶಪಡಿಸಿಕೊಳ್ಳಲಾದ ಲಾರಿಯನ್ನು ಅಲ್ಲಿಯೇ ಬಿಡಲಾಗಿದೆ. ಈ ನಡುವೆ ಅಲ್ಲಿಗೆ ಆಗಮಿಸಿದ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತು ತಂಡ ಕೈಯಲ್ಲಿ ಕತ್ತಿ ಹಿಡಿದುಕೊಂಡು ಲಾರಿಯ ಟರ್ಪಾಲ್ ಕಡಿಯುತ್ತಿರುರುವುದು, ಪೋಲೀಸರ ಸಮ್ಮುಖವೇ ವಾಹನದಿಂದ ಜಾನುವಾರುಗಳನ್ನು ಇಳಿಸುವುದು. ಸಾರ್ವಜನಿಕರ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ. ಅರುಣ್ ಕುಮಾರ್ ಪುತ್ತಿಲ ಓರ್ವ ಕೋಮುವಾದಿ, ಕ್ರಿಮಿನಲ್ ಹಿನ್ನಲೆಯ ಗೂಂಡಾ ಆಗಿದ್ದು, 25 ಕ್ಕೂ ಮಿಕ್ಕಿದ ಪ್ರಕರಣವು ಆತನ ಮೇಲಿದೆ. ಆತನನ್ನು ಗಡಿಪಾರು ಮಾಡಲು ಪೋಲೀಸರು ಸಿದ್ಧತೆಯನ್ನೂ ನಡೆಸುತ್ತಿದ್ದಾರೆ. ಅಂತಹ ವ್ಯಕ್ತಿ ಪೋಲೀಸರ ಸಮ್ಮುಖದಲ್ಲೇ ಜಾನುವಾರುಗಳನ್ನು ವಾಹನದಿಂದ ಇಳಿಸುತ್ತಾರೆಂದರೆ ಪೋಲೀಸರಿಗೆ ಪುತ್ತಿಲರಂತಹ ಕೋಮುವಾದಿಯ ಸಹಾಯ ಯಾಕಾಗಿ ಅಗತ್ಯವಿತ್ತು ಎನ್ನುವ ಪ್ರಶ್ನೆ ಮೂಡುತ್ತದೆ ಜಿಲ್ಲೆಯಲ್ಲಿ ಈ ಹಿಂದೆ ನಡೆದ ಹಲವಾರು ಗೋಸಾಗಾಟ ಪತ್ತೆ ಪ್ರಕರಣಗಳಲ್ಲಿ ಹಿಂದೂಪರ ಸಂಘಟನೆಗಳು ಮತ್ತು ಪೋಲೀಸರು ಶಾಮೀಲಾಗಿರುವಂತಹ ಹಲವು ಪ್ರಕರಣಗಳಿದ್ದು, ಈ ಪ್ರಕರಣಗಳ ಸಾಲಿಗೆ ಇದೂ ಸೇರ್ಪಡೆಯಾಗಿದೆಯೋ ಅನ್ನುವ ಸಂಶಯ ಮೂಡುತ್ತಿದೆ. ಅಲ್ಲದೆ ಆದ್ದರಿಂದ ಪುತ್ತಿಲ ವಿರುದ್ದ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ದಕ್ಷರಿದ್ದರೂ, ಅವರಿಗೆ ತಪ್ಪು ಮಾಹಿತಿಯನ್ನು ನೀಡಿಲಾಗಿದೆ ಎಂದು ಆರೋಪಿಸಿದ ಅವರು ಇದಕ್ಕೆ ಪೂರಕವಾಗಿ ಪೋಲೀಸ್ ಇನ್ಸ್ ಸ್ಪೆಕ್ಟರ್ ಗೆ ಎಸ್.ಪಿ ಚಾರ್ಜ್ ಮೆಮೋ ನೀಡಿದ್ದಾರೆ. ಈ ಕಾರಣಕ್ಕೆ ಪ್ರಕರಣವನ್ನು ಉನ್ನತ ಪೋಲೀಸ್ ಅಧಿಕಾರಿಗಳಿಂದ ತನಿಖೆ ನಡೆಸಬೇಕು. ಇಲ್ಲದೇ ಹೋದಲ್ಲಿ ಸರಕಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೆಂದು ಅವರು ಒತ್ತಾಯಿಸಿದರು.
ಫಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು ಈ ಬಾರಿ ಕಾಲಿಗೆ ಗುಂಡು ಹಾರಿಸಿದ್ದಾರೆ, ಮುಂದೆ ಬೇರೆ ಕಡೆಗೂ ಗುಂಡು ಹಾಕಲಿದ್ದಾರೆ ಎನ್ನುವ ಮೂಲಕ ಬಿಜೆಪಿ ಸಂಘ ಪರಿವಾರವನ್ನು ಸಂತೃಪ್ತಿಗೊಳಿಸುವ ಹೇಳಿಕೆ ನೀಡಿದ್ದಾರೆ. ಪೋಲೀಸರಿಗೆ ಕೊಲ್ಲಲು ಸೂಚನೆಯನ್ನು ನೀಡುವಂತೆ ಶಾಸಕರ ಹೇಳಿಕೆಯಿದ್ದು, ಶಾಸಕರು ಸಂಘಪರಿವಾರ ಮತ್ತು ಬಿಜೆಪಿ ಮನಸ್ಥಿತಿಯಿಂದ ಇನ್ನೂ ಹೊರಬಂದಿಲ್ಲ ಎಂಬುದು ಇದರಿಂದ ವ್ಯಕ್ತವಾಗುತ್ತದೆ. ಕೋಮುಸೂಕ್ಷ್ಮ ಪ್ರದೇಶವಾಗಿರುವ ಇಲ್ಲಿ ಶಾಸಕರ ಹೇಳಿಕೆಯು ಕೋಮುವಾದಿಗಳಿಗೆ ಪ್ರೇರಣೆ ನೀಡುವಂತಿದೆ. ಈ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ಗಮನಿಸಿ ಶಾಸಕರ ವಿರುದ್ದ ಪ್ರಕರಣ ದಾಖಲಿಸಬೇಕು ಎಂದು ಆವರು ಆಗ್ರಹಿಸಿದರು.
ಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಸಿದ್ದೀಕ್ ಕೆ.ಎ, ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಶ್ರಫ್ ಬಾವು, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮತ್ತು ಅಬ್ದುಲ್ ಹಮೀದ್ ಸಾಲ್ಮರ ಉಪಸ್ಥಿತರಿದ್ದರು.