ದುಡಿಯುವ ವರ್ಗ ಹಸಿವಿನಿಂದ ಬಳಲುತ್ತಿರುವ ಭಾರತದಲ್ಲಿ  284 ಬಿಲಿಯನೇರ್‌ಗಳ ಸೃಷ್ಟಿ ಮೋದಿ ಆಡಳಿತದ ಕೊಡುಗೆ: ಡಾ. ಕೆ. ಪ್ರಕಾಶ್

ದುಡಿಯುವ ವರ್ಗ ಹಸಿವಿನಿಂದ ಬಳಲುತ್ತಿರುವ ಭಾರತದಲ್ಲಿ 284 ಬಿಲಿಯನೇರ್‌ಗಳ ಸೃಷ್ಟಿ ಮೋದಿ ಆಡಳಿತದ ಕೊಡುಗೆ: ಡಾ. ಕೆ. ಪ್ರಕಾಶ್


ಮಂಗಳೂರು: ನವ ಉದಾರೀಕರಣದ ನೀತಿಗಳು ಅನುಷ್ಠಾನಗೊಂಡು ಮೂರು ದಶಕಗಳ ಈ ಅವಧಿಯಲ್ಲಿ ಭಾರತ ಅರ್ಥಿಕ ಸಮಾನತೆಯ ಉತ್ತುಂಗಕ್ಕೆ ತಲುಪಿದೆ. ಕಾರ್ಮಿಕರು ಕೂಲಿಕಾರರು ಸೇರಿದಂತೆ ದುಡಿಯುವ ಜನರು ಹಸಿವಿನಿಂದ ಬಳುತ್ತಿದ್ದಾರೆ. ಹೊಸ ಹೊಸ ಕಾಯಿದೆಗಳು ದುಡಿಯುವ ಜನರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಇದರ ಪರಿಣಾಮ ಬಾರತ ದೇಶದಲ್ಲಿ 284 ಬಿಲಿಯನೇರ್‌ಗಳು ಸೃಷ್ಠಿಯಾಗಿದ್ದಾರೆ ಎಂದು ಸಿಐಟಿಯುನ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಡಾ. ಕೆ. ಪ್ರಕಾಶ್ ಹೇಳಿದರು.

ಅವರು ನಗರದಲ್ಲಿಂದು ಜರುಗಿದ ಸಿಐಟಿಯು 18ನೇ ದ.ಕ. ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ನವ ಉದಾರೀಕರಣ ನೀತಿಗಳ ಪೂರ್ವದಲ್ಲಿ ಭಾರತದಲ್ಲಿ ಬಿಲಿಯನೇರ್ ಗಳು ಇರಲಿಲ್ಲ.ಈ ರೀತಿಯ ಬಡತನವೂ ಇರಲಿಲ್ಲ.ಆದರೆ ಇಂದು 284 ಬಿಲಿಯನೇರ್ ಗಳ ಕೈಯಲ್ಲಿ ಭಾರತ ದೇಶದ ಎರಡು ವರ್ಷಗಳ ಬಜೆಟ್ ಮೌಲ್ಯದಷ್ಟು ಸಂಪತ್ತು ಶೇಖರಣೆಗೊಂಡಿದೆ.ಇದರ ಪರಿಣಾಮವಾಗಿ ಹಸಿವು ಬಡತನ ನಿರುದ್ಯೋಗ ಅನಾರೋಗ್ಯ ಮಿತಿಮೀರುತ್ತಿದೆ.ಇದು ಅಂದಿನ ಕಾಂಗ್ರೆಸ್ ಆಡಳಿತದಲ್ಲಿ ಪ್ರಾರಂಭಗೊಂಡು ಪ್ರಸ್ತುತ ನರೇಂದ್ರ ಮೋದಿ ಕಾಲದಲ್ಲಿ ಉತ್ತುಂಗವನ್ನು ತಲುಪಿದೆ.ಇಂದು ಭಾರತದ ಆಡಳಿತವು ಈ ಬಿಲಿಯನೇರ್ ಗಳ ಮೂಗಿನ ನೇರಕ್ಕೆ ನಡೆಯುತ್ತಿದೆ. ನೀತಿಗಳೆಲ್ಲವೂ ಅವರ ಪರವಾಗಿ ರೂಪುಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರಂತರವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆಯೇ ಹೊರತು ದುಡಿಯುವ ವರ್ಗದ ಪರವಾಗಿ ಯಾವುದೇ ನೀತಿಗಳನ್ನು ಜಾರಿಗೊಳಿಸುತ್ತಿಲ್ಲ.ಇಂತಹ ಸರಕಾರಗಳ ಆಕ್ರಮಣಕಾರಿ ನೀತಿಗಳನ್ನು ಕಾರ್ಮಿಕ ವರ್ಗ ಸಮರಶೀಲ ಹೋರಾಟಗಳ ಮೂಲಕವೇ ಹಿಮ್ಮೆಟ್ಟಿಸಲು ಸಾಧ್ಯ ಎಂದು ಹೇಳಿದರು.

ಧ್ವಜಾರೋಹಣದ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿ ಬಳಿಕ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಅವರು ದ.ಕ. ಜಿಲ್ಲೆಯ ಕಾರ್ಮಿಕ ಚಳುವಳಿಯ ಧೀರೋದತ್ತವಾದ ಹೋರಾಟಗಳನ್ನು ಮೆಲುಕು ಹಾಕುತ್ತಾ, ಮುಂಬರುವ ದಿನಗಳಲ್ಲಿ ಬಲಿಷ್ಠವಾದ ಕಾರ್ಮಿಕ ಚಳುವಳಿಯನ್ನು ಕಟ್ಟುವ ಮೂಲಕ ಜಿಲ್ಲೆಯ ಸೌಹಾರ್ದತಾ ಪರಂಪರೆಯನ್ನು ಉಳಿಸಲು ಕಾರ್ಮಿಕ ವರ್ಗ ಕಟಿಬದ್ದರಾಗಿ ಶ್ರಮಿಸಬೇಕೆಂದು ಹೇಳಿದರು.

ಸಿಐಟಿಯು ಜಿಲ್ಲಾ ನಾಯಕರಾದ ವಸಂತ ಅಚಾರಿ, ಸುಕುಮಾರ್ ತೊಕ್ಕೋಟು, ಬಿ.ಎಂ. ಭಟ್, ರಮಣಿ ಮೂಡಬಿದ್ರೆ, ಪದ್ಮಾವತಿ ಶೆಟ್ಟಿ, ವಸಂತಿ ಕುಪ್ಪೆಪದವು, ಸುಂದರ ಕುಂಪಲ, ಗಿರಿಜಾ ಮತ್ತಿತರರು ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಅಗಲಿದ ನಾಯಕರಿಗೆ ಶ್ರದ್ಧಾಂಜಲಿ ನಿರ್ಣಯವನ್ನು ಯೋಗೀಶ್ ಜಪ್ಪಿನಮೊಗರು ಮಂಡಿಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಉಪಾಧ್ಯಕ್ಷ ರವಿಚಂದ್ರ ಕೊಂಚಾಡಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article