ಕತಾರ್‌ನಿಂದ ಬಂದ ಕ್ಷಣದಲ್ಲೇ ಬಂಧನ
ಮಂಗಳೂರು: 2021ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿ ವರ್ಷಗಳ ಬಳಿಕ ಕತಾರ್‌ನಿಂದ ಮಂಗಳೂರಿಗೆ ಬಂದ ಕ್ಷಣದಲ್ಲೇ ಬಂಧಿತನಾಗಿದ್ದಾನೆ.
ಆರೋಪಿ ಕುದ್ರೋಳಿಯ ಮೊಹಮ್ಮದ್ ಸಿನಾನ್ (24) ವಿರುದ್ಧ 2021ರಲ್ಲಿ ಉರ್ವ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಆದರೆ ಆರೋಪಿ ಮೊಹಮ್ಮದ್ ಸಿನಾನ್ ಕಳೆದ ಎರಡು
ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನ ವಿರುದ್ಧ ವಾರೆಂಟ್ ಹೊರಡಿಸಿತ್ತು. ನಂತರ ವಾರೆಂಟ್ ಜಾರಿಗೆ ತರಲು ಭಾರತ ಸರ್ಕಾರದ ಇಮಿಗ್ರೇಶನ್ ಬ್ಯೂರೋ ಮೂಲಕ ಲುಕ್ ಔಟ್ ಸರ್ಕ್ಯುಲರ್ ನೀಡಲಾಗಿತ್ತು.
ಕತಾರ್‌ನಿಂದ ಮಂಗಳೂರಿಗೆ ವಿಮಾನ ಮೂಲಕ ಆಗಮಿಸಿದಾಗ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಶನ್ ಅಧಿಕಾರಿಗಳು ಸಿನಾನ್ನನ್ನು ವಶಕ್ಕೆ ಪಡೆದು ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು. ಬಳಿಕ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಅದೇ ದಿನ ನ್ಯಾಯಾಲಯದ ಜಾಮೀನು ಷರತ್ತು ಉಲ್ಲಂಘಿಸಿ ಕಲಾಪಗಳಿಗೆ ಹಾಜರಾಗದ ಹಿನ್ನೆಲೆಯಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಹೊಸ ಪ್ರಕರಣ ದಾಖಲಿಸಲಾಗಿದೆ.