ಮಂಗಳೂರು ದಸರಾ ವೈಭವದ ಶೋಭಾಯಾತ್ರೆ: ಮಂದಸ್ಮಿತ ನವದುರ್ಗೆಯ ಸಹಿತ ಹುಲಿವೇಷ ಆಕರ್ಷಣೆ-ಕಣ್ತುಂಬಿಕೊಂಡ ಜನಸಾಗರ

ಮಂಗಳೂರು ದಸರಾ ವೈಭವದ ಶೋಭಾಯಾತ್ರೆ: ಮಂದಸ್ಮಿತ ನವದುರ್ಗೆಯ ಸಹಿತ ಹುಲಿವೇಷ ಆಕರ್ಷಣೆ-ಕಣ್ತುಂಬಿಕೊಂಡ ಜನಸಾಗರ


ಮಂಗಳೂರು: ಮಂಗಳೂರು ದಸರಾ ಖ್ಯಾತಿಯ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವದ ಅಂತಿಮ ಕ್ಷಣ ಪಲ್ಲಕ್ಕಿಗಳಂತೆ ಗೋಚರಿಸುವ ತೆರೆದ ಮಂಟಪಗಳಲ್ಲಿ ಸಾಗಿ ಬರುವ ಮಂದಸ್ಮಿತ ನವದುರ್ಗೆಯ ಶೋಭಾಯಾತ್ರೆಗೆ ಗುರುವಾರ ಸಂಜೆ ಚಾಲನೆ ದೊರೆಯಿತು. ದಸರಾ ಶೋಭಾಯಾತ್ರೆಗೆ ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಸಂಜೆ ಚಾಲನೆ ನೀಡಿದರು.

ಬಿಲ್ಲವ ಸಮಾಜದ ಮುಖಂಡರಾಗಿದ್ದ ಕೊರಗಪ್ಪ ಮತ್ತು ತಂಡದ ನೇತೃತ್ವದಲ್ಲಿ 1913ರಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಅಮೃತಹಸ್ತದಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವರ ಪ್ರತಿಷ್ಠಾಪನೆ ನಡೆದಿತ್ತು. ಪ್ರಸ್ತುತ ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಂತೆ ಮಂಗಳೂರು ದಸರಾ ಮಹೋತ್ಸವ ನಡೆಯಿತು.

ರಾಜಬೀದಿ ದೀಪಗಳಿಂದ ಅಲಂಕೃತ:

ದಸರಾ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಸಹಿತ ನಗರದ ಪ್ರಮುಖ ಬೀದಿ, ಗುಡಿಗೋಪುರಗಳು ದೀಪಗಳಿಂದ ಅಲಂಕೃತಗೊಂಡಿವೆ. ದಸರಾದ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ನಡೆಯುವ ರಾಜಬೀದಿ ಸೇರಿದಂತೆ ನಗರಾಲಂಕಾರದ ಉಸ್ತುವಾರಿಯನ್ನು ಮಹಾನಗರ ಪಾಲಿಕೆ ವಹಿಸಿಕೊಂಡಿದೆ. ಕುದ್ರೋಳಿ ದೇವಳ ರಸ್ತೆ, ಲೇಡಿಹಿಲ್ ನಾರಾಯಣಗುರು ವೃತ್ತ, ಎಂಜಿ. ರಸ್ತೆ, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ ಗಣಪತಿ ಹೈಸ್ಕೂಲ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳು ವಿದ್ಯುತ್ ದೀಪಗಳಿಂದ ಕಂಗೋಳಿಸಿತು. 

ವೈಭವದ ದಸರಾ ಶೋಭಾ ಯಾತ್ರೆ:

ಗುರುವಾರ ಸಂಜೆ 4 ಗಂಟೆ ವೈಭವದ ದಸರಾ ಶೋಭಾ ಯಾತ್ರೆ ಆರಂಭಗೊಂಡಿದ್ದು, ಅಲಂಕೃತ ಕೊಡೆಗಳು, ಜಾನಪದ ಕಲಾ ತಂಡಗಳು, ಭಜನಾ ತಂಡ, ವಾದ್ಯ- ಬ್ಯಾಂಡ್ ತಂಡಗಳು ಭಾಗವಹಿಸಿದ್ದವು. ಮಹಾಗಣಪತಿಯ ವಿಗ್ರಹಕ್ಕೆ ಪೂಜೆ ನೆರವೇರಿಸಿ ಶೋಭಾಯಾತ್ರೆಯ ಮುಂಚೂಣಿಯ ವಾಹನದಲ್ಲಿ ಇರಿಸಲಾಯಿತು. ಬಳಿಕ ಬಳಿಕ ನಾರಾಯಣ ಗುರು, ಗಣಪತಿ, ಆದಿಶಕ್ತಿ, ನವದುರ್ಗೆ, ಶಾರದಾ ಮಾತೆಯ ಟ್ಯಾಬ್ಲೊ ಸಾಗಿ, ಬಳಿಕ ನಗಾರಿ, ಗೊಂಡಡಕ್ಕೆ, ಕಹಳೆ, ಡೊಳ್ಳು ಕುಣಿತ, ಕಂಗೀಲು, ಸಮಲ ವಾದನ, ತಮಟೆ ವಾದನ, ವೀರಗಾಸೆ, ಹಗಲು ವೇಷ, ಕುರುಬರ ಡೊಳ್ಳು ತಂಡ ಸೇರಿದಂತೆ ವಿವಿಧ ಕಲಾ ತಂಡಗಳು ದಸರಾದ ವೈಭವ ಹೆಚ್ಚಿಸಿದೆ.

ಬಿರುವೆರ್ ಕುಡ್ಲದ ಆಪರೇಷನ್ ಸಿಂಧೂರ್ ವೈಭವ:

ವರ್ಣರಂಜಿತ ಮಂಗಳೂರು ದಸರಾ ಮೆರವಣಿಗೆ ವೈಭವದಿಂದ ಶ್ರೀ ಕ್ಷೇತ್ರ ಕುದ್ರೋಳಿಯಿಂದ ಹೊರಟು ಸುಮಾರು ೯ ಕಿ.ಮೀ. ಸಾಗಿ ಮತ್ತೆ ಕುದ್ರೋಳಿ ಕ್ಷೇತ್ರ ತಲುಪುವುದು ವಾಡಿಕೆ. ಈ ಮೆರವಣಿಗೆಯ ವೈಭವ ಹೆಚ್ಚಿಸಿದ್ದೇ ಟ್ರಕ್‌ಗಳ ಮೂಲಕ ಬಿಂಬಿಸಿದ್ದ ಸ್ತಬ್ಧಚಿತ್ರಗಳ ವೈಭವ...!, ಬಿರುವೆರ್ ಕುಡ್ಲದ ಆಪರೇಷನ್ ಸಿಂಧೂರ್ ವೈಭವ ಈಬಾರಿಯ ವಿಶೇ ಆಕರ್ಷಣೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಪಾಪಿ ಪಾಕಿಸ್ತಾನದ ವಿರುದ್ದ ಭಾರತದ ಸೇನಾ ಕಾರ್ಯಾಚರಣೆಯ ಅದ್ಬುತ ವೈಭವದ ಸ್ತಬ್ಧಚಿತ್ರ ಇದಾಗಿದೆ.

ಡಿಜೆಗೆ ವಿದಾಯ-ಟ್ರಕ್‌ಗಳ ಮೆರುಗು:

ಈ ಬಾರಿ ಡಿಜೆಗೆ ಸಂಪೂರ್ಣ ವಿದಾನ ನೀಡಿದ್ದರಿಂದ ಟ್ರಕ್‌ಗಳ ಮೆರುಗು ಹೆಚ್ಚಿದೆ. ಶೋಭಾಯಾತ್ರೆಯಲ್ಲಿ ಟ್ರಕ್‌ಗಳು ಮೆರುಗು ಹೆಚ್ಚಿಸಿಕೊಂಡು ಜನತೆ ಸಂಭ್ರಮ, ಸಡಗರಗಳಿಂದ ಪಾಲ್ಗೊಳ್ಳುವಂತೆ ಮಾಡಿತು. ಪ್ರಮುಖವಾಗಿ ಮಂಜಲ್ ಬೈಲ್ ಫ್ರೆಂಡ್ಸ್ ತಂಡವು 75ನೇ ವರ್ಷದ ಸಂಭ್ರಮದ ಸಾಮಾಜಿಕ ಕಳಕಳಿ, ಸ್ವಾವಲಂಬನೆ ಹಾಗೂ ಸ್ವಚ್ಛತೆ ಕುರಿತ ವಿಶೇಷ ಸ್ಥಬ್ಧಚಿತ್ರ, ಕಾಳಿಚರಣ್ ಫ್ರೆಂಡ್ಸ್ ತಂಡವು ಶಾರದಾ ವೇಷದ ವಿಶಿಷ್ಟ ಟ್ಯಾಬ್ಲೊ, ಬರ್ಕೆ ಫಂಡ್ಸ್ ನಿಂದ ಸಿನಿಮಾವೊಂದರ ದೃಶ್ಯ ರೂಪಕ, ಶಿವ ಫ್ರೆಂಡ್ಸ್ ತಂಡದ ದೃಶ್ಯ ರೂಪಕ, ಗ್ರೀನ್ ಪಾರ್ಕ್ ಫ್ರೆಂಡ್ಸ್ ತಂಡದಿಂದ ಹುಲಿ, ಜೂನಿಯರ್ ಬಾಯ್ಸ ತಂಡದಿಂದ ವಿಶೇಷ ನೃತ್ಯ ರೂಪಕದ ಸ್ಥಬ್ದಚಿತ್ರ, ಬಲ್ಲಾಳ್ ಭಾಗ್ ಫ್ರೆಂಡ್ಸ್ ನಿಂದ ಮೂಸಿಕಲ್ ಪ್ಯೂಶನ್ ಟಾಕ್ಲಿ, ಸತ್ಯಸಾರಾಮಣಿ ತಂಡದಿಂದ ಹುಲಿ, ಯುವ ಸಂಗಮ್ ತಂಡದಿಂದ ಹುಲಿಯೊಂದಿಗೆ ಮಕ್ಕಳ ಶಾರದಾ ಟಾಬೋ ರಾರಾಜಿಸಲಿದೆ. ಓಂ ಸಾಯಿ ಫ್ರೆಂಡ್ಸ್ ತಂಡವು ಕೊಟ್ಟಿಯೂರು ದೇವಸ್ಥಾನದ ಹಿನ್ನಲೆಯ ಕುರಿತಾದ ಸ್ಥಬ್ದಚಿತ್ರ, ಪದುವಾ ಫ್ರೆಂಡ್ಸ್ ತಂಡವು ಪುರಿ ಜಗನಾಥ ದೇವಸ್ಥಾನದ ಪ್ರತಿಕೃತಿಯ ಸ್ಥಬ್ದಚಿತ್ರ ಮೊದಲ ಬಾರಿಗೆ ಮಂಗಳೂರಿನಲ್ಲಿ ಕಂಗೊಳಿಸಿದೆ. ಬಿರುವೆರ್ ಕುಡ್ಲ ತಂಡದಿಂದ ಆಪರೇಷನ್ ಸಿಂಧೂರ, ಹುಲಿ ವೇಷ ಸೇರಿಂದಂತೆ 6 ಟಾಬ್ಲೊಗಳಿವೆ. ಕುಡ್ಲ ಬ್ರದರ್ಸ್ ತಂಡದಿಂದ ದೇಶಭಕ್ತಿಯ ಕುರಿತಾದ ವಿನೂತನ ದೃಶ್ಯರೂಪಕ, ಬಲಿಪೆ ಫ್ರೆಂಡ್ಸ್, ತುಳುನಾಡ ಬಿರುವೆರ್ ತಂಡದಿಂದ ಹುಲಿ, ಜವನೆರ್ ಕುಡ್ಲ ತಂಡದಿಂದ ಹುಲಿ ಹಾಗೂ ದೇವಿಯ ಅಷ್ಟಭುಜದ ವೇಷದೊಂದಿಗೆ ಕುಣಿತ ಭಜನೆ ಟಾಬ್ಲೊ, ಕುಡ್ಲ ಫ್ರೆಂಡ್ಸ್ ಹುಲಿ ಹಾಗೂ ಮಕ್ಕಳ ವಿಶೇಷ ಟಾಬ್ಲೊ, ರೈಸಿಂಗ್ ಫ್ರೆಂಡ್ಸ್ ತಂಡದ ಹುಲಿ, ಟೀಮ್ ಅವತಾರ್ ತಂಡದ ರಾಮಾಯಣ ಕುರಿತ ವಿಶೇಷ ಟಾಬ್ಲೊ, ಕಾಲಭೈರವ ಫ್ರೆಂಡ್ಸ್ ತಂಡ ಹುಲಿಯ ಟಾಬ್ಲೊ, ತುಳುನಾಡ ಪ್ರತಿಷ್ಠಾ ತಂಡವು ದೇವಸ್ಥಾನದ ಹಿನ್ನಲೆಯ ಸ್ತಬ್ದಚಿತ್ರ, ಟೀಮ್ ತಾಂಡವದಿಂದ ವಿನೂತನ ಟಾಬ್ಲೊಗಳು ಈಬಾರಿಯ ವಿಶೇಷ ಆಕರ್ಷಣೆ.

ಕುದ್ರೋಳಿ ಪುಷ್ಕರಣಿಯಲ್ಲಿ ಶಾರದಾ ವಿಸರ್ಜನೆ:

ಮಂಗಳೂರು ದಸರಾ ಮೆರವಣಿಗೆ ಅ.2ರ ಸಂಜೆ ಕುದ್ರೋಳಿ ಕ್ಷೇತ್ರದಿಂದ ಹೊರಟ ಮಂದಸ್ಮಿತ ನವದುರ್ಗೆಯ ಶೋಭಾಯಾತ್ರೆಯು ಮಣ್ಣಗುಡ್ಡ, ಲೇಡಿಹಿಲ್, ಲಾಲ್‌ಭಾಗ್, ಎಂ.ಜಿ.ರಸ್ತೆ, ಕೆ.ಎಸ್.ರಾವ್ ರಸ್ತೆ, ವಿ.ವಿ.ಕಾಲೇಜು, ಜಿ.ಎಚ್.ಎಸ್.ರಸ್ತೆ, ರಥಬೀದಿ, ಅಳಕೆ ಮೂಲಕ ಸುಮಾರು 9 ಕಿ.ಮೀ. ಸಾಗಿ ಮತ್ತೆ ಕುದ್ರೋಳಿಗೆ ಶುಕ್ರವಾರ ಬೆಳಗ್ಗೆ ಪ್ರಾತಃಕಾಲದಲ್ಲಿ ತಲುಪಿ ಮಂಟಪ ಪೂಜೆ ಬಳಿಕ ಕುದ್ರೋಳಿ ಕ್ಷೇತ್ರದ ಪುಷ್ಕರಣಿಯಲ್ಲಿ ಶಾರದಾ ವಿಸರ್ಜನೆ ನಡೆಯುವ ಮೂಲಕ ಸಾಮರಸ್ಯ ವೈಭವದ ಮಂಗಳೂರು ದಸರಾ ಸಂಪನ್ನ ಗೊಂಡಿತು. 

ಪಾಲಿಕೆ ವಿರುದ್ದ ಆಸ್ತಿಕರ ಆಕ್ರೋಷ:

ಮಂಗಳೂರು ದಸರಾ ವೈಭವದ ಶೋಭಾಯಾತ್ರೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ದಾರ್ಮಿಕ ಶುದ್ದತೆಗೆ ಗಮನಹರಿಸದೆ ನವದುಗೆಘಯರಿಗೆ ಅವಮಾನವೆಸಗಿದೆ ಎಂದು ಆಸ್ತಿಕರ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ದಸರಾ ಹಿನ್ನೆಲೆಯಲ್ಲಿ ಮಂಗಳೂರು ನಗರದ ಹಲವಡೆ ಪಾಲಿಕೆ ಅನುಪತಿ ಪಡೆದು ಹಲವರು ಸಂತೆ ಸ್ಟಾಲ್‌ಗಳನ್ನು ಹಾಕಿದ್ದು, ನವದುಗೆಘಯರು ಸಾಗುವ ಪ್ರಮುಖ ರಾಜಬೀದಿ ಲೇಡಿಹಿಲ್, ಲಾಲ್‌ಭಾಗ್ ಮಧ್ಯೆ ಮೊಟ್ಟೆ, ಚಿಕನ್‌ಟಿಕ್ಕ ಸ್ಟಾಲ್, ಚಿಕನ್ ಸವರ್ಮ ಸ್ಟಾಲ್‌ಗಳಿಗೆ ಅವಕಾಶ ನೀಡಿರುವುದರಿಂದ ಇಲ್ಲಿ ಸಾಲು ಸಾಲು ಮಾಂಸಹಾರಿ ಆಹಾರ ಕೌಂಟರ್‌ಗಳು ಗುರುವಾರ ತೆರೆದುಕೊಂಡಿತ್ತು. ಈ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿದಾಗ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಂದಲೇ ಅನುಮತಿ ಪಡೆದು ಈ ಸ್ಟಾಲ್‌ಗಳನ್ನು ಹಾಕಲಾಗಿದೆ ಎಂದು ವ್ಯಾಪಾರಿಗಳು ಹೇಳಿರುವುದರಿಂದ ಪಾಲಿಕೆ ವಿರುದ್ಧ ಆಸ್ತಿಕರ ಆಕ್ರೋಷ ವ್ಯಕ್ತವಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article