ಕರಾವಳಿಯಲ್ಲಿ ಸಂಜೆ ಸಾಧಾರಣ ಮಳೆ
ಮಂಗಳೂರು: ಕರಾವಳಿಯಲ್ಲಿ ಶುಕ್ರವಾರ ಹಲವಡೆ ಗುಡುಗು, ಮಿಂಚು ಸಹಿತ ಹಗುರದಿಂದ ಮಳೆಯಾಗಿದೆ. ದ.ಕ. ಜಿಲ್ಲೆಯಾದ್ಯಂತ ಇಡೀ ದಿನ ಬಿಸಿಲು ಸಹಿತ ಸಂಜೆ ಅಲ್ಲಲ್ಲಿ ಅಲ್ಪ ಮಳೆ ಸುರಿದಿದೆ. ಮುಂದಿನ 4-5 ದಿನ ಕರಾವಳಿಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದ.ಕ. ಜಿಲ್ಲೆಯ ಗ್ರಾಮಿಣ ಭಾಗದಲ್ಲಿ ಶುಕ್ರವಾರ ನಸುಕಿನ ಜಾವದಿಂದಲೇ ಉತ್ತಮ ಮಳೆ ಕಾಣಿಸಿತ್ತು. ಬೆಳಗ್ಗೆ ಸ್ವಲ್ಪ ಹೊತ್ತು ಮಳೆಗೆ ಬಿಡುವು ಹೊರತುಪಡಿಸಿದರೆ ಇಡೀ ದಿನ ಬಿಸಿಲೂ ಇತ್ತು. ಗ್ರಾಮಾಂತರ ಪ್ರದೇಶದಲ್ಲಿ ಅಷ್ಟಾಗಿ ನಿರಂತರ ಮಳೆಯಾಗದಿದ್ದರೂ ಮಂಗಳೂರಿನಲ್ಲಿ ಸಂಜೆ ವೇಳೆ ಅಬ್ಬರದ ಗುಡುಗು ಸಹಿತ ಕೆಲವು ಹೊತ್ತು ಮಳೆ ಸುರಿದಿದೆ. ದ.ಕ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗಿನ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ 7.1 ಮಿಮಿ ಮಳೆ ದಾಖಲಾಗಿತು.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಸಾಧ್ಯತೆ
ಹವಾಮಾನ ಇಲಾಖೆ ಮಾಹಿತಿಯಂತೆ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಸಾಧ್ಯತೆಗಳಿದ್ದು, ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಿಟ್ಟು ಬಿಟ್ಟು ದಿನದಲ್ಲಿ 2, 3 ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಸಧ್ಯದ ಮಾಹಿತಿಯಂತೆ ಅರಬ್ಬಿ ಸಮುದ್ರದ ತಿರುವಿಕೆಯು ಇನ್ನೆರಡು ದಿನಗಳಲ್ಲಿ ವಾಯುಭಾರ ಕುಸಿತವಾಗಿ ಮಾರ್ಪಾಡಾಗುವ ಲಕ್ಷಣಗಳಿದ್ದು, ಇದರೊಂದಿಗೆ ರಾಜ್ಯದಲ್ಲಿ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಗಳಿವೆ.