ಹೊಸ ಮಾರ್ಗಸೂಚಿಯಂತೆ ಕೆಂಪು ಕಲ್ಲು ತೆಗೆಯಲು ಅವಕಾಶ: ದಿನೇಶ್ ಗುಂಡೂರಾವ್
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಕೆಂಪುಕಲ್ಲಿಗೆ ಸಂಬಂಧಿಸಿ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದೆ. ಜಿಲ್ಲಾಧಿಕಾರಿ ಈ ಬಗ್ಗೆ ಅಂತಿಮ ನಿರ್ದೇಶನಗಳನ್ನು ನೀಡಲಿದ್ದಾರೆ.
ಬಳಿಕ ಕೆಂಪುಕಲ್ಲು ಜನರಿಗೆ ಸಿಗಲಿದೆ. ನಾನ್ ಸಿಆರ್‌ಝಡ್ ಮರಳು ಪಡೆಯಲು ಟೆಂಡರ್ ಮೂಲಕ ತೆಗೆಯಲು ಅವಕಾಶ ಮಾಡಿಕೊಡಲಾಗಿದೆ. ಸಿಆರ್‌ಝಡ್ ಮರಳು ವಿಚಾರ ಕೇಂದ್ರದ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಸ್ತೆ ಗುಂಡಿಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಬಗ್ಗೆ ಏನೇನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳಲಾಗುವುದು. ಇದು ಸರಕಾರದ ಗಮನದಲ್ಲೂ ಇದೆ. ಇನ್ನೂ ಮಳೆ ಸುರಿಯುತ್ತಿರುವುದರಿಂದ ಸ್ವಲ್ಪ ವಿಳಂಬವಾಗಿದೆ. ಎನ್‌ಡಿಆರ್‌ಎಫ್-ಎಸ್‌ಡಿಆರ್‌ಎಫ್, ಕಂದಾಯ ಇಲಾಖೆಯಿಂದ ಮಳೆ ಹಾನಿಗೆ ಏನು ಅನುದಾನಗಳು ಬಿಡುಗಡೆಯಾಗಬೇಕೋ ಅದು ಬಿಡುಗಡೆಯಾಗಿದೆ. ದ.ಕ, ಶಿವಮೊಗ್ಗ, ಕೊಡಗು ಪ್ರದೇಶಗಳಿಗೆ ಹೆಚ್ಚಿನ ಮೊತ್ತ ಬಿಡುಗಡೆಯಾಗಿದೆ. ಜಿಲ್ಲೆಗೆ ಎಷ್ಟುಅನುದಾನ ಬಂದಿದೆ ನೋಡಿಕೊಂಡು ಶೀಘ್ರದಲ್ಲೇ ಕಾಮಗಾರಿಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗುವುದು ಎಂದರು.
ನವೆಂಬರ್‌ನಲ್ಲಿ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎನ್ನುವ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ಶಿವರಾಮೇಗೌಡ ಅವರು ಮತ್ತೆ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಮೊದಲಿಂದಲೂ ಸುಮ್ಮನೆ ಹೇಳಿಕೆಗಳನ್ನು ನೀಡುವುದು ಅವರ ಹವ್ಯಾಸ. ತಾವು ಸುದ್ದಿಯಲಿ ರಬೇಕು ಎಂದು ಮಾಧ್ಯಮಗಳ ಮುಂದೆ ಹೇಳಿಕೆ ಕೊಡುವುದು ಕೆಲವರ ಚಟ. ಸುಮ್ಮನೆ ಈ ರೀತಿಯ ಹೇಳಿಕೆ ಕೊಡುವ ಬದಲು ಪಕ್ಷ ಸಂಘಟನೆಗೆ ಕೆಲಸ ಮಾಡಲಿ. ಪಕ್ಷ ವರಿಷ್ಠರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದೇ ಅಂತಿಮ. ಅನಾವಶ್ಯಕ ಗೊಂದಲ ಬೇಡ ಎಂದರು.
ಧರ್ಮಸ್ಥಳ ಪ್ರಕರಣ ಕುರಿತ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್, ಧರ್ಮಸ್ಥಳದ ಪ್ರಕರಣದಲ್ಲಿ ಇಂತಹವರನ್ನು ಬಂಧಿಸಿ ಎಂದು ಸರಕಾರ ಹೇಳುವುದಕ್ಕೆ ಆಗುವುದಿಲ್ಲ. ಎಸ್‌ಐಟಿಯವರು ಅವರ ಸಾಕ್ಷಿ ಆಧಾರಗಳ ಮೇಲೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತಾರೆ. ಷಡ್ಯಂತ್ರ ಆಗಿದೆ ಎಂದು ಗೊತ್ತಾಗಿರುವುದು ತನಿಖೆಯಿಂದಲೇ. ಮುಂದೇನು ಮಾಡಬೇಕು ಎನ್ನುವುದನ್ನೂ ಅವರೇ ತೀರ್ಮಾನ ಕೈಗೊಳ್ಳುತ್ತಾರೆ. ರಾಜಕೀಯವಾಗಿ ಅಥವಾ ಸರಕಾರದಿಂದ ಯಾವುದೇ ಹಸ್ತಕ್ಷೇಪ ಈ ಪ್ರಕರಣದಲ್ಲಿ ಮಾಡಿಲ್ಲ. ಎಸ್‌ಐಟಿಯವರಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.