ಕೋಟೇಶ್ವರ ದಸರಾ: ಶ್ರೀ ಶಾರದೆಯ ಸೀರೆಗಳ ಬಹಿರಂಗ ಏಲಂ
ಗುರುವಾರ ಮಧ್ಯಾಹ್ನ ನಡೆದ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆಯ ಬಳಿಕ ಕಿಕ್ಕಿರಿದು ನೆರೆದಿದ್ದ ಭಕ್ತ ಸ್ತೋಮದ ಸಮಕ್ಷಮದಲ್ಲಿ ಸೀರೆಗಳ ಹರಾಜು ನಡೆಯಿತು.
ನಾಲ್ಕು ದಿನಗಳ ಕಾಲ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವಯುತವಾಗಿ ನಡೆದ ಈ ಸಾರ್ವಜನಿಕ ಶಾರದೋತ್ಸವದ ಕೊನೆಯ ದಿನ ದೇವಿಯ ಸೀರೆ, ಪಟ್ಟೆಗಳನ್ನು ವಿಸರ್ಜನಾ ಮೆರವಣಿಗೆಯ ಮುನ್ನ ಸಭೆಯಲ್ಲಿ ಬಹಿರಂಗವಾಗಿ ಏಲಂ ಮಾಡಲಾಗುತ್ತದೆ. ಮನೆಯಲ್ಲಿ ಮದುವೆ, ಮುಂಜಿ ಮುಂತಾದ ಶುಭ ಸಮಾರಂಭಗಳನ್ನು ಏರ್ಪಡಿಸುವವರು ಸಾಧಾರಣವಾಗಿ ಈ ಏಲಂನಲ್ಲಿ ಗರಿಷ್ಠ ಬೆಲೆ ಕೂಗಿ ಶ್ರೀ ಶಾರದೆಯ ಪ್ರಸಾದ ರೂಪವಾದ ಸೀರೆಗಳನ್ನು ದಕ್ಕಿಸಿಕೊಳ್ಳುತ್ತಾರೆ. ಶಾರದೋತ್ಸವ ಸಮಿತಿಗೆ ಮುಂದಿನ ಉತ್ಸವಗಳಿಗಾಗಿ ಈ ಮೊತ್ತ ವಿನಿಯೋಗವಾಗುತ್ತದೆ. ಆದ್ದರಿಂದ ನೆರೆದ ಭಕ್ತಾದಿಗಳು ಸ್ವಲ್ಪ ಧಾರಾಳವಾಗಿಯೇ ಬೆಲೆ ಕೂಗುತ್ತಾರೆ. ಮತ್ತು ಪೈಪೋಟಿಯಿಂದಾಗಿಯೂ ಕೆಲವೊಮ್ಮೆ ಏಲಂನಲ್ಲಿ ಒಳ್ಳೆಯ ಆದಾಯ ಬರುವುದಿದೆ.
ಈ ಬಾರಿ ಏಲಂನಲ್ಲಿ ಗರಿಷ್ಠ ಬೆಲೆ ಕೂಗಿದ ಮಂಜುನಾಥ ದೇವಾಡಿಗ, ಜಯಂತಿ, ನಾರಾಯಣ ಪೈಂಟರ್ ಹಾಗೂ ಶಾರದೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿ ಆಶಾ ಜೀವಿ ಸೀರೆಗಳನ್ನು ತಮ್ಮದಾಗಿಸಿಕೊಂಡರೆ, ಕಾರ್ಯದರ್ಶಿ ಪ್ರಭಾಕರ ಶೆಟ್ಟಿಗಾರ್ ಪಟ್ಟೆ ಮಡಿಯನ್ನು ಪಡೆದುಕೊಂಡರು.
ಸಮಿತಿ ಅಧ್ಯಕ್ಷ ಜೀವಿ ವೆಂಕಟೇಶ್ ಆಚಾರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.