ಧರ್ಮಸ್ಥಳ ಪ್ರಕರಣ: ಎಸ್‌ಐಟಿ ವಿಚಾರಣೆ ಎದುರಿಸಿದ ಅಂಬ್ಯುಲೆನ್ಸ್ ಚಾಲಕ
ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂತಿಟ್ಟ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಅಂಬ್ಯುಲೆನ್ಸ್ ಚಾಲಕರಿಬ್ಬರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದಂತೆ ಬೆಳ್ತಂಗಡಿಯ ಆಂಬುಲೆನ್ಸ್ ಚಾಲಕ ಹಮೀದ್ ವಿಚಾರಣೆ ಎದುರಿಸಿದರು.
ಹಮೀದ್ ಕಳೆದ 23 ವರ್ಷಗಳಿಂದ ಅಂಬ್ಯುಲೆನ್ಸ್ ಚಾಲಕರಾಗಿದ್ದು, ಧರ್ಮಸ್ಥಳದ ಯುಡಿಆರ್ ಪ್ರಕರಣದ ಶವಗಳನ್ನು ಶವಗಾರಕ್ಕೆ ಸಾಗಿಸುತಿದ್ದರು. ಈ ಬಗ್ಗೆ ಆತನ ವಿಚಾರಣೆ ನಡೆದಿದೆ. ಇನ್ನೊಬ್ಬ ಚಾಲಕ ಜಲೀಲ್ ಬಾವ ಈಗಾಗಲೇ ವಿಚಾರಣೆ ಎದುರಿಸಿದ್ದಾರೆ.
ಹಾಜರಾಗದ ಯೂಟ್ಯೂಬರ್‌ಗಳು..
ವಿಚಾರಣೆಗೆ ಹಾಜರಾಗುವಂತೆ ಯುಟ್ಯೂಬರ್‌ಗಳಿಗೆ ಎಸ್‌ಐಟಿ ನೋಟಿಸ್ ನೀಡಿ ಮೂರು ದಿನ ಕಳೆದರೂ ಯುಟ್ಯೂಬರ್‌ಗಳು ಇನ್ನೂ ವಿಚಾರಣೆಗೆ ಹಾಜರಾಗಿಲ್ಲ. ಯೂಟ್ಯೂಬರ್ ಸಮೀರ್ ಎಂಡಿ ಸೇರಿದಂತೆ ಐದಕ್ಕೂ ಹೆಚ್ಚು ಯೂಟ್ಯೂಬರ್‌ಗಳಿಗೆ ನೋಟೀಸ್ ನೀಡಲಾಗಿತ್ತು. ಸಂಚಾರಿ ಸ್ಟುಡಿಯೋ ಯುಟ್ಯೂಬ್ ಚಾನೆಲ್‌ನ ಸಂತೋಷ್ ಬಂದಿದ್ದರೂ ತನಿಖೆಗೆ ಹಾಜರಾಗದೆ ಮರಳಿದ್ದ. ಪ್ರಶ್ವಾವಳಿಯೊಂದಿಗೆ ಎಸ್‌ಐಟಿ ಅಧಿಕಾರಿಗಳು ತನಿಖೆಗೆ ಸಿದ್ಧವಾಗಿದ್ದರು. ಬುರುಡೆ ಚಿನ್ನಯ್ಯನ ಹೇಳಿಕೆ ಆಧಾರದಲ್ಲಿ ತನಿಖೆ ನಡೆಯುತ್ತಿದೆ.
ಆದೇಶ ಕಾಯ್ದಿರಿಸಿದ ಕೋರ್ಟ್..
ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಕೂಡಿಟ್ಟ ಪ್ರಕರಣದಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ದ. ಕ. ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಇಂದು ನಡೆದಿದ್ದು, ಆದೇಶವನ್ನು ಅ. 9ಕ್ಕೆ ಕಾಯ್ದಿರಿಸಲಾಗಿದೆ.