ರಿಕ್ಷಾ ಚಾಲಕನ ಮೇಲೆ ದೌರ್ಜನ್ಯ: ಟ್ರಾಫಿಕ್ ಎಎಸ್‌ಐ ಮತ್ತು ಪಿಸಿಐ ಅಮಾನತು
ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ಚಿದಾನಂದ ರೈ ಮತ್ತು ಶ್ರೀಶೈಲ ಎಂ.ಕೆ ಎಂಬವರನ್ನು ಇಲಾಖೆಯು ಕರ್ತವ್ಯದಿಂದ ಅಮಾನತುಗೊಳಿಸಿದೆ. ಪುತ್ತೂರು ತಾಲೂಕಿನ ಕುರಿಯ ಎಂಬಲ್ಲಿನ ನಿವಾಸಿ ಬಶೀರ್ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಅಟೋರಿಕ್ಷಾ ಚಾಲಕ. ಬಶೀರ್ ಅವರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಸಂಜೆ ಘಟನೆ ನಡೆದಿದ್ದು, ಬಶೀರ್ ಅವರು ಚಲಾಯಿಸುತ್ತಿದ್ದ ಆಟೋ ರಿಕ್ಷಾವನ್ನು ಬೈಕ್‌ನಲ್ಲಿ ಬೆನ್ನಟ್ಟಿಕೊಂಡು ಬಂದ ಚಿದಾನಂದ ರೈ ಮತ್ತು ಶ್ರೀಶೈಲ ಅವರಿಬ್ಬರೂ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಂಚಾರಿ ಪೊಲೀಸರ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪೊಲೀಸರು ಆಟೋ ರಿಕ್ಷಾಕ್ಕೆ ಅಡ್ಡಲಾಗಿ ಬಂದು ಚಾಲಕನನ್ನು ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸುತ್ತಿರುವುದು ಹಾಗೂ ಆತ ಧರಿಸಿದ್ದ ಸಮವಸ್ತçದ ಕಾಲರ್ ಹಿಡಿದು ಎಳೆಯುತ್ತಿರುವುದು ವೀಡಿಯೋದಲ್ಲಿ ಕಂಡು ಬಂದಿತ್ತು.
ಅಟೋ ಅವರಿಗೆ ಟಾರ್ಗೆಟ್-ಬಶೀರ್
ಅವರಿಗೆ ನಮ್ಮ ಮೇಲೆ ಯಾಕೆ ದ್ವೇಷವೋ ಗೊತ್ತಿಲ್ಲ. ನಾನು ಮಾಣಿ ಮೈಸೂರು ರಸ್ತೆಯಲ್ಲಿರುವ ಫಿಲೋಮಿನಾ ಕಾಲೇಜ್ ಮುಂಬಾಗದ ರಸ್ತೆ ಬದಿಯಲ್ಲಿ ಅಟೋ ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದೆ. ಆ ಸಂದರ್ಭದಲ್ಲ ಒನ್‌ವೇ ಮೂಲಕ ಅಲ್ಲಿಗೆ ಬೈಕ್‌ನಲ್ಲಿ ಬಂದ ಪೊಲೀಸರು ನನ್ನ ರಿಕ್ಷಾಕ್ಕೆ ಅಡ್ಡ ನಿಲ್ಲಿಸಿದರು. ಆಗ ಬೆದರಿದ ನಾನು ರಿಕ್ಷಾ ಚಾಲಾಯಿಸಿಕೊಂಡು ಮುಂದಕ್ಕೆ ಹೋದೆ. ಆದರೆ ನನ್ನನ್ನು ಬೆನ್ನಟ್ಟಿಕೊಂಡು ಬಂದ ಪೊಲೀಸರಾದ ಚಿದಾನಂದ ರೈ ಮತ್ತು ಶ್ರೀಶೈಲ ಅವರು ನನ್ನ ರಿಕ್ಷಾಕ್ಕೆ ಅಡ್ಡಗಟ್ಟಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದರು. ನಾನು ಅದನ್ನು ವೀಡಿಯೋ ಮಾಡಿದ್ದೆ. ಅಲ್ಲದೆ ಬಳಿಕ ನನ್ನನ್ನು ಮತ್ತು ರಿಕ್ಷಾವನ್ನು ಠಾಣೆಗೆ ಕರೆದೊಯ್ದು ವೀಡಿಯೋ ಡಿಲೀಟ್ ಮಾಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದರು. ವೀಡಿಯೋ ಡಿಲೀಟ್ ಮಾಡದಿದ್ದಲ್ಲಿ ನಿಮ್ಮ ಮೇಲೆ ಕೇಸು ಹಾಕುತ್ತೇವೆ. ಎಫ್‌ಐಆರ್ ಮಾಡಿ ನಿನ್ನನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸಿದರು ಎಂದು ಆಸ್ಪತ್ರೆಯಲ್ಲಿರುವ ಬಶೀರ್ ಆರೋಪಿಸಿದ್ದಾರೆ.
ರಿಕ್ಷಾ ಚಾಲಕರಿಂದ ಪ್ರತಿಭಟನೆ
ರಿಕ್ಷಾ ಚಾಲಕ ಬಶೀರ್ ಮೇಲೆ ನಡೆಸಿರುವ ಹಲ್ಲೆಯನ್ನು ಖಂಡಿಸಿ ಹಾಗೂ ತಕ್ಷಣವೇ ದೌರ್ಜನ್ಯ ನಡೆಸಿದ ಪೊಲೀಸರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಶನಿವಾರ ಮದ್ಯಾಹ್ನ ನಗರದಲ್ಲಿ ರಿಕ್ಷಾ ಚಾಲಕರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪುತ್ತೂರು ಠಾಣಾ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಅವರು ಪ್ರತಿಭಟನಾ ನಿರತರನ್ನು ಸಮಾಧಾನಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಪ್ರತಿಭಟನೆಗೆ ಕೆಆರ್‌ಎಸ್ ಪಕ್ಷದ ಮುಖಂಡರು ಬೆಂಬಲ ವ್ಯಕ್ತ ಪಡಿಸಿದರು. ಕೆಆರ್‌ಎಸ್ ಪಕ್ಷದ ದ.ಕ.ಜಿಲ್ಲಾಧ್ಯಕ್ಷ ವೇಣುಗೋಪಾಲ್, ಜಿಲ್ಲಾ ಕಾರ್ಯದಶಿ ಶಿವರಾಜ್, ಮುಖಂಡರಾದ ರಾಜೇಶ್ ಕುಮಾರ್, ಶಿಜು, ನವೀನ್ ಮತ್ತಿತರರು ಉಪಸ್ಥಿತರಿದ್ದು ಬಡ ಅಟೋ ಚಾಲಕನಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ಪೊಲೀಸರಿಬ್ಬರ ಅಮಾನತು:
ದಿನಾಂಕ: 17-10-2025 ರಂದು ಸಂಜೆ ಆಟೋ ಚಾಲಕ ಬಶೀರ್ ಕುರಿಯ ಗ್ರಾಮ ಎಂಬವರು ಸಮವಸ್ತ್ರ ಧರಿಸಿದೇ ಆಟೋ ಚಲಾಯಿಸಿಕೊಂಡು ಬರುತ್ತಿರುವಾಗ, ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಪೊಲೀಸ್ ಠಾಣಾ ಚಿದಾನಂದ ರೈ, ಎ.ಎಸ್.ಐ ಮತ್ತು ಸಿಪಿಸಿ ಶೈಲ ಎಂ ಕೆ, ಕೈ ಸನ್ನೆ ಮೂಲಕ ನಿಲ್ಲಿಸಲು ಸೂಚಿಸಿದ್ದರೂ, ಆತನು ತನ್ನ ವಾಹನವನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಬಂದು ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡಿರುತ್ತಾನೆ, ಈ ಕುರಿತು ಆತನನ್ನು ಹಿಂಬಾಲಿಸಿ ವಾಹನವನ್ನು ತಡೆದು ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಆಗಿರುತ್ತದೆ. ಇದನ್ನು ಪರಿಶೀಲಿಸಿ ಚಿದಾನಂದ ರೈ, ಎ.ಎಸ್.ಐ ಮತ್ತು ಸಿಪಿಸಿ ಶೈಲ ಎಂ ಕೆ ರವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.