ಜಾಮೀನು ಅರ್ಜಿ ವಜಾ
ಪುತ್ತೂರು: ನೆಹರೂನಗರದಲ್ಲಿ 2023ರ ನ.6 ರಂದು ತಡರಾತ್ರಿ ನಡೆದ ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಜಾಮೀನು ಕೋರಿ 3ನೇ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ಆರೋಪಿಗಳ ಪೈಕಿ 3ನೇ ಆರೋಪಿ ಮಂಜುನಾಥ್ ಅಲಿಯಾಸ್ ಹರಿ ಅನಾರೋಗ್ಯದ ಕುರಿತು ಉಲ್ಲೇಖಿಸಿ ಜಾಮೀನಿನಲ್ಲಿ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದ. ದೂರುದಾರರ ಪರ ಸರ್ಕಾರಿ ಅಭಿಯೋಜಕರಾದ ಜಯಂತಿ ಸತೀಶ್ ಭಟ್ ಅವರು ವಾದಿಸಿ, ಆರೋಪಿಗೆ ಜಾಮೀನು ಮಂಜೂರು ಮಾಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅವರ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಘಟನೆಯ ಹಿನ್ನಲೆ:
ಪುತ್ತೂರು ತಾಲೂಕಿನ ಕಬಕ ಗ್ರಾಮದ ಶೇವಿರೆ ನಿವಾಸಿ, ಕಲ್ಲೇಗ ಕಲ್ಕುಡ-ಕಲ್ಲುರ್ಟಿ ದೈವಸ್ಥಾನದ ಪರಿಚಾರಕ ಚಂದ್ರಶೇಖರ ಗೌಡ ಮತ್ತು ಕಬಕ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕಮಲ ದಂಪತಿಯ ಪುತ್ರ ಅಕ್ಷಯ ಕಲ್ಲೇಗ (26) ಅವರನ್ನು ಆರೋಪಿಗಳಾದ ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ,ಪುತ್ತೂರು ಜೆಡಿಎಸ್ ಕ್ಷೇತ್ರ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾಮಣಿ ಅವರ ಪುತ್ರ ಮನೀಶ್, ಬನ್ನೂರು ಗ್ರಾಮದ ಕೃಷ್ಣನಗರ ನಿವಾಸಿ, ಖಾಸಗಿ ಬಸ್ ಚಾಲಕನಾಗಿ ದುಡಿಯುತ್ತಿದ್ದ ಚೇತನ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ, ನಗರದ ಹೊರವಲಯದ ಪಡೀಲು ನಿವಾಸಿ ಕೇಶವ ಪಡೀಲು ಮತ್ತು ಪಡೀಲು ನಿವಾಸಿ ಮಂಜುನಾಥ ಯಾನೆ ಮಂಜು ಕೊಲೆ ಮಾಡಿದ್ದರು. ಅಕ್ಷಯ ಕಲ್ಲೇಗ ಹಾಗೂ ಮನೀಶ್, ಚೇತನ್ ನಡುವೆ ದೂರವಾಣಿಯಲ್ಲಿ ಅಪಘಾತದ ವಿಚಾರಕ್ಕೆ ಮಾತಿನ ಚಕಮುಕಿ ನಡೆದಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ವಿವೇಕಾಂದ ಕಾಲೇಜಿನ ತಿರುವು ರಸ್ತೆಯ ಕೆನರಾ ಬ್ಯಾಂಕ್ ಎಟಿಎಂ ಎದುರು ತಲವಾರಿನಿಂದ ಕಡಿದು ಅಕ್ಷಯ ಕಲ್ಲೇಗ ಅವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಬಗ್ಗೆ ಅಕ್ಷಯ್ ಜತೆಗಿದ್ದ ಸ್ನೇಹಿತ ವಿಖ್ಯಾತ್ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.