ಸಂತ ಫಿಲೋಮಿನಾ ಕಾಲೇಜಿನಲ್ಲಿ ಗಾಂಧಿ ಸ್ಮೃತಿ
Thursday, October 2, 2025
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು, ಯಕ್ಷ ಕಲಾಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಸಂಯೋಗದಲ್ಲಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮತ್ತು ಮಹಾನ್ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ ಕಾರ್ಯಕ್ರಮ ಕಾಲೇಜಿನ ಸ್ಪಂದನ ಸಭಾಂಗಣದಲ್ಲಿ ನಡೆಯಿತು.
ವಿಶ್ವ ನಾಯಕನ ಸ್ಮರಣೆ ಮತ್ತು ತತ್ವಗಳ ಗೀತ ಗಾಯನದ ಮೂಲಕ ‘ಗಾಂಧೀ ಸ್ಮೃತಿ’ ಅರ್ಥಪೂರ್ಣವಾಗಿ ಮೂಡಿ ಬಂತು.
ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಚಂದ್ರಶೇಖರ. ಕೆ, ಅವರು ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳು ಮತ್ತು ಜೀವನ ಸಾಧನೆಗಳ ಬಗ್ಗೆ ತಿಳಿಸಿ ನುಡಿನಮನಗೈದರು.
ಗಾಂಧೀ ಸ್ಮೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೋಂತೆರೋ ಅವರು, ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಸೌಮ್ಯತೆಯ ಬಗ್ಗೆ ತಿಳಿಸಿದರು. ಸರಳತೆ ಮತ್ತು ನೈತಿಕತೆ ಮಹಾನ್ ವಿಶ್ವ ನಾಯಕರಲ್ಲಿ ಅಂತಸ್ತವಾಗಿತ್ತು. ಆದರ್ಶ ಜೀವನ ಶೈಲಿ ಮತ್ತು ಆಚರಣೆಗಳಿಂದ ಪ್ರಪಂಚದಲ್ಲಿ ಜನಾದರಗಳನ್ನು ಹೊಂದಿದ್ದರು ಎಂದು ತಿಳಿಸಿದರು.
ಪ್ರಸ್ತುತ ಸಮಾಜದಲ್ಲಿ ನೈತಿಕತೆಯನ್ನು ಹೊಂದಿದ ನಾಯಕರ ಅಗತ್ಯತೆಯನ್ನು ಕಂಡುಕೊಳ್ಳಬೇಕು ಮತ್ತು ಗಾಂಧಿ ಸ್ಮರಣೆಯಿಂದ ಸ್ಪೂರ್ತಿಯನ್ನು ಹೊಂದಲಿ ಎಂದು ಆಶಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿಯವರ ವಿಚಾರಧಾರೆಗಳು ವಿಸ್ತಾರವಾಗಿ ಜನರಿಗೆ ತಲುಪಬೇಕು ಎಂದು ತಿಳಿಸಿದರು. ಗಾಂಧಿ ಸ್ಮೃತಿ ಗಾಯನ ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ಅಪೂರ್ವವಾಗಿ ಮೂಡಿ ಬಂತು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪುಷ್ಪ ಎನ್. ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕ ಯಕ್ಷಕಲಾ ಕೇಂದ್ರದ ನಿರ್ದೇಶಕ ಪ್ರಶಾಂತ್ ರೈ ವಂದಿಸಿದರು. ಯಕ್ಷ ಕಲಾಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥನೆಗೈದರು.


