ಪುತ್ತೂರು ದಸರಾ ವೈಭವಯುತ ಶಾರದೆಯ ಶೋಭಾಯಾತ್ರೆ: ಕಣ್ಮನ ಸೆಳೆದ ಕೇರಳದ ಸಾಂಸ್ಕೃತಿಕ ಕಲೆಗಳ ರಂಗು
ಪುತ್ತೂರು ಶಾರದೋತ್ಸವ ಐತಿಹಾಸಿಕ ಕಾರಣಿಕ ಹೊಂದಿದೆ. ಬೊಳುವಾರು ವೃತ್ತದಿಂದ ಆರಂಭಗೊಂಡ ಶಾರದಾ ದೇವಿಯ ವೈಭವದ ಶೋಭಾ ಯಾತ್ರೆಯನ್ನು ಕೇಸರಿ ಧ್ವಜಾರೋಹಣ ಮಾಡುವ ಮೂಲಕ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ ನೀಡಿದರು. ಕಟೀಲು ಕ್ಷೇತ್ರದ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ದೀಪ ಆರಾಧನೆ ಮಾಡಿದರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪುಷ್ಪಾರ್ಚನೆ ಮಾಡಿದರು. ಮಂದಿರದ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ಅವರು ತೆಂಗಿನಕಾಯಿ ಒಡೆದರು.
ಮಾಜಿ ಶಾಸಕ ಸಂಜೀವ ಮಠಂದೂರು, ಪ್ರಮುಖರಾದ ಡಾ. ಸುರೇಶ್ ಪುತ್ತೂರಾಯ, ಮುರಳೀಕೃಷ್ಣ ಹಸಂತಡ್ಕ, ಡಾ. ಕೃಷ್ಣ ಪ್ರಸನ್ನ, ಸಾಜ ರಾಧಾಕೃಷ್ಣ ಆಳ್ವ, ಚಿತ್ರನಟ ಮನೋಜ್ ಪುತ್ತೂರು, ಹಿರಿಯರಾದ ಕಿಟ್ಟಣ್ಣ ಗೌಡ, ಪದ್ಮಾವತಿ ಕೆದಂಬಾಡಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಕೃಷ್ಣ ಕುಮಾರ್ ರೈ, ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಕೃಷ್ಣ ಎಂ. ಅಳಿಕೆ, ಮಾತೃಮಂಡಳಿಯ ಸದಸ್ಯೆ ಚಿತ್ರಾ ಪ್ರಸಾದ್ ರೈ, ನವನೀತರಾಜ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಶೋಭಾಯಾತ್ರೆ ಸಮಿತಿ ಸಂಚಾಲಕ ನವೀನ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.
ಆಕರ್ಷಕ ಶೋಭಾಯಾತ್ರೆ:
ಶೋಭಾ ಯಾತ್ರೆಯಲ್ಲಿ ಡಿಜೆ ಹಾಗೂ ಪಟಾಕಿಗಳ ಸದ್ದುಗಳಿಲ್ಲದೆ ಸಾಂಸ್ಕೃತಿಕ ಮೆರುಗಿನೊಂದಿಗೆ ಭಕ್ತಿ ಗೀತೆ ಹಾಡು, ಭಜನೆ, ಕಲಾತಂಡಗಳ ಪ್ರದರ್ಶನ ಶೋಭಾಯಾತ್ರೆಯನ್ನು ಆಕರ್ಷಣೀಯಗೊಳಿಸಿತ್ತು. ಮೆರವಣಿಗೆ ಜತೆಗೆ ಸ್ವಚ್ಛತಾ ವಾಹನವೂ ತೆರಳಿ ಸ್ವಚ್ಛತಾ ಕಾರ್ಯ ನಡೆಸಿದವು.
ಬೊಳುವಾರುನಿಂದ ಆರಂಭಗೊಂಡ ಈ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ ಮುಖ್ಯರಸ್ತೆ ಮೂಲಕ ದರ್ಬೆ ತನಕ ಸಾಗಿ ಬಳಿಕ ವಾಪಾಸು ಮಹಾಲಿಂಗೇಶ್ವರ ದೇವಳಕ್ಕೆ ಬಂದು ಅಲ್ಲಿ ಲಿಫ್ಟ್ ವ್ಯವಸ್ಥೆಯ ಮೂಲಕ ದೇವಿಯ ವಿಗ್ರಹದ ಜಲಸ್ಥಂಭನ ನಡೆಯಿತು. ಶೋಭಾಯಾತ್ರೆ ಸಂದರ್ಭ ಬೊಳುವಾರು ವೃತ್ತ, ಇನ್‌ಲ್ಯಾಂಡ್ ಮಯೂರ, ಶ್ರೀಧರ್ ಭಟ್ ಬಿಲ್ಡಿಂಗ್, ಬಸ್ ನಿಲ್ದಾಣ, ಹೋಟೆಲ್ ಸುಜಾತ ಬಳಿ ಹಾಗೂ ದರ್ಬೆ ವೃತ್ತಗಳಲ್ಲಿ ಕಲಾ ತಂಡಗಳ ಪ್ರದರ್ಶನ ನಡೆಯಿತು. ಭಕ್ತರು ದೇವಿಗೆ ಮಂಗಳಾರತಿ, ಹಣ್ಣುಕಾಯಿ ಸಮರ್ಪಣೆ ಮಾಡಿದರು.
ಶೋಭಾಯಾತ್ರೆಯಲ್ಲಿ ಮುಂಚೂಣಿಯಲ್ಲಿ ಭಗವಾಧ್ವಜದ ವಾಹನ, ಅನಂತರದಲ್ಲಿ ಕುಣಿತ ಭಜನಾ ತಂಡಗಳು, ಭಜನಾ ಸಂಕೀರ್ತಣಾ ವಾಹನ, ಕಣ್ಣೂರಿನ ಸಹಸ್ರ ವಿಳಕ್ಕೆ, ಸೌಂಡ್ಸ್ ವಾಹನ, ಪಾಲಕ್ಕಾಡ್‌ನ ದೇವ ನೃತ್ಯಂ, ಕಣ್ಣೂರಿನ ಎಳಕ್ಕಾಟ್ಟಂ, ಪಾಲಕ್ಕಾಡ್‌ನ ಫ್ಲವರ್ ಡ್ಯಾನ್ಸ್, ತ್ರಿಶೂರ್ ನ ಸಿಂಗಾರಿ ಕಾವಡಿ, ತ್ರಿಶೂರ್‌ನ ದೇವಿ ಬೋರ್ಡ್, ಕಾಸರಗೋಡಿನ ಕರಿಂಕಾಳಿ, ಬೆಟ್ಟಂಪಾಡಿಯ ಸಿಂಗಾರಿ ಮೇಳಂ (ಚೆಂಡೆ), ಮಲಪ್ಪುರಂನ ಕಥಕ್ಕಳಿ ಬೋರ್ಡ್, ತ್ರಿಶೂರ್‌ನ ಪೂಕಾವಡಿ, ಪುತ್ತೂರು ಲಕ್ಷ್ಮೀ ದೇವಿ ಬೆಟ್ಟದ ಚೆಂಡೆ ಮೇಳ, ಕೊಟ್ಟಾಯಂನ ಗರುಡಾಯನ (ಗರುಡಾ ನೃತ್ಯಂ), ಗಣೇಶ್ ಎ.ಕೆ. ಅವರಿಂದ ಸ್ಯಾಕ್ರೋಫೋನ್, ಕೊನೆಯಲ್ಲಿ ಶಾರದೆಯ ರಥ ಸಾಗಿತು. ದರ್ಭೆ ತನಕ ಶೋಭಾಯಾತ್ರೆ ನಡೆದು ಬಳಿಕ ಶಾರದೆಯ ಜಲಸ್ಥಂಭನ ಕಾರ್ಯ ನಡೆಯಿತು.