ಕಾಂಗ್ರೆಸ್ ಮುಖಂಡ ಮಹಮ್ಮದ್ ಆಲಿ ಆರೋಪ: ಬಿಜೆಪಿಯಿಂದ ಸಮೀಕ್ಷೆ ಬಗ್ಗೆ ಗೊಂದಲ ಸೃಷ್ಠಿಯ ಪಿತೂರಿ
ಪುತ್ತೂರು: ರಾಜ್ಯ ಸರ್ಕಾರ ನಡೆಸಲುದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗೊಂದಲ ಸೃಷ್ಠಿಸಿ ಹಿಂದುಳಿದ ಬಡವರ ಬದುಕಿಗೆ ಕೊಳ್ಳಿ ಇಡುವ, ಸಮೀಕ್ಷೆಯನ್ನು ಹಳ್ಳ ಹಿಡಿಸುವ ಪಿತೂರಿ ಬಿಜೆಪಿಯಿಂದ ಆಗುತ್ತಿದೆ. ಬಿಜೆಪಿಯ ಒತ್ತಾಸೆಗೆ ಮತ್ತು ಅಪಪ್ರಚಾರಕ್ಕೆ ಬಲಿಯಾಗಿ ಸಮೀಕ್ಷೆಗೆ ಮಾಹಿತಿ ನೀಡಲು ನಿರಾಕರಿಸಿದವರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಬಾರದು ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿ ಅವರು ಆಗ್ರಹಿಸಿದರು.
ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ತಾಲೂಕಿನಲ್ಲಿ ಸಮೀಕ್ಷೆ ನಡೆಸುತ್ತಿರುವ ಕೆಲವು ಮಂದಿ ಸಮೀಕ್ಷಕರು ಕ್ರೈಸ್ತ, ಮುಸ್ಲಿಂ ಮತ್ತು ಓಬಿಸಿ ವರ್ಗದ ಮನೆಗಳನ್ನು ಬಿಟ್ಟು ಸಮೀಕ್ಷೆ ನಡೆಸುತ್ತಿರುವ ಬಗ್ಗೆ ಮತ್ತು ಕೆಲವು ಮನೆಗಳಲ್ಲಿ ಮಕ್ಕಳನ್ನು ಸಮೀಕ್ಷೆಯಿಂದ ಕೈಬಿಡುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ. ಕೆಲವು ಸಮೀಕ್ಷಕರು ಬಿಜೆಪಿಯ ಪ್ರಭಾವಕ್ಕೆ ಒಳಗಾದಂತೆ ಕಾಣುತ್ತಿದೆ. ಪುತ್ತೂರಿನ ಹೆಚ್ಚಿನ ಅಧಿಕಾರಿಗಳು ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ ಎಂದು ಆರೋಪಿಸಿದರು. ಹಾಗಾಗಿ ಜಿಲ್ಲೆಯ ಸಮೀಕ್ಷೆಯನ್ನು ಮಾನಿಟರ್ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಆಗ್ರಹಿಸಿದರು.
ನಮ್ಮ ಮನೆಗೆ ಬಂದರೆ ನಾವು ಮಾಹಿತಿ ಕೊಡುವುದಿಲ್ಲ. ನಿಮ್ಮ ಮನೆಗೆ ಬಂದರೆ ಮಾಹಿತಿ ನಿರಾಕರಿಸಿ. ನೀವು ಕೊಡುವ ಮಾಹಿತಿ ಸುರಕ್ಷಿತವಲ್ಲ, ಅದನ್ನು ದುರುಪಯೋಗ ಪಡಿಸಲಾಗುತ್ತಿದೆ ಎಂದು ಬಿಜೆಪಿಗರು ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲಾ ಜಾತಿಯವರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅರಿಯುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಈ ಸಮೀಕ್ಷೆಯ ಕುರಿತಾದ ಸತ್ಯ ವಿಚಾರವನ್ನು ಮರೆಮಾಚಿ ತಪ್ಪು ಕಲ್ಪನೆಯನ್ನು ಬಿತ್ತುವ ಕೆಲಸ ಆಗುತ್ತಿದೆ ಎಂದು ಅವರು ಆರೋಪಿಸಿದರು.
ಸಮೀಕ್ಷೆ ನಿರಾಕರಿಸಿ ಎಂದು ಪ್ರಚಾರ ಮಾಡುತ್ತಿರುವ ಬಿಜೆಪಿಗರೇ ಮುಂದೊಂದು ದಿನ ಎಲ್ಲಾ ಜನರು ಸಮೀಕ್ಷೆಗೆ ಒಳಪಟ್ಟಿಲ್ಲ. ಹಾಗಾಗಿ ಈ ಸಮೀಕ್ಷೆ ಅವೈಜ್ಞಾನಿಕವಾಗಿದೆ ಎಂದು ತಕರಾರು ಎತ್ತಿ ಹಿಂದುಳಿದ ವರ್ಗಗಳ ಅನ್ನದ ಬಟ್ಟಲಿಗೆ ಮಣ್ಣು ಸುರಿಯುವ ಸಾಧ್ಯತೆ ಹೆಚ್ಚಾಗಿದೆ. ಯಾವ ಜಾತಿಯ ಸ್ಥಿತಿ ಹೇಗಿದೆ ಎಂಬುವುದನ್ನು ದಾಖಲಿಸದಂತೆ ತಡೆಯುವುದೇ ಬಿಜೆಪಿ ಅಪಪ್ರಚಾರದ ಉದ್ದೇಶವಾಗಿದೆ ಎಂದ ಅವರು, ಸಮೀಕ್ಷೆಗೆ ಮಾಹಿತಿ ನೀಡದವರ ಪಟ್ಟಿ ತಯಾರಿಸಬೇಕು. ಮಾಹಿತಿ ನೀಡದವರಿಗೆ ಗೃಹಲಕ್ಷ್ಮಿ, ಭಾಗ್ಯಲಕ್ಷ್ಮಿ ಸೇರಿದಂತೆ ಸರ್ಕಾರದ ಸವಲತ್ತುಗಳನ್ನು ನೀಡಬಾರದು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಮೌರೀಸ್ ಮಸ್ಕರೇನ್ಹಸ್, ಸುರೇಶ್ ಪೂಜಾರಿ, ಆಲಿಕುಂಞಿ ಕೊರೆಂಗಿಲ ಮತ್ತು ಜಗದೀಶ್ ಕಜೆ ಉಪಸ್ಥಿತರಿದ್ದರು.