ಫಾರ್ಮ್‌ನೊಳಗೆ ಮಾನವ ಆಸ್ಥಿಪಂಜರ ಪತ್ತೆ
ಅಕ್ಷಯ ಫಾರ್ಮ್ ಒಳಗಡೆಯ ಮರದ ಕೆಳಗಡೆ ಮಾನವನ ಅಸ್ಥಿ, ತಲೆಬುರುಡೆ ಮತ್ತು ಅವಶೇಷಗಳು ಪತ್ತೆಯಾಗಿವೆ. ಫಾರ್ಮ್ ನೊಳಗಡೆ ತೋಟದ ಕೆಲಸ ಮಾಡುತ್ತಿದ್ದ ಸ್ಥಳೀಯ ಕಾರ್ಮಿಕರಿಗೆ ಇಂದು ಬೆಳಗ್ಗೆ ಅಸ್ಥಿಗಳು ಕಂಡಿವೆ. ಸ್ಥಳದಲ್ಲಿ ಹಸಿರು ಬರ್ಮುಡ ಚಡ್ಡಿ, ಹಸಿರು ಟೀ ಶರ್ಟ್ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಇದು ಗಂಡಸಿನ ದೇಹದ ಅವಶೇಷಗಳಂತೆ ಕಾಣುತ್ತದೆ. ಮರದ ಗೆಲ್ಲಿನಲ್ಲಿ ನೈಲಾನ್ ಹಗ್ಗದ ನೇಣಿನ ಕುಣಿಕೆ ಇದ್ದು ಅದರಲ್ಲಿ ಹೆಡ್ ಫೋನ್ ಮತ್ತು ಎಲುಬುಗಳು ನೇತಾಡುತ್ತಿವೆ. ಮತ್ತೊಂದು ಗೆಲ್ಲಲ್ಲಿ ಕೇಸರಿ ಶಾಲು ಜೋತು ಬಿದ್ದಿದೆ. ಬರ್ಮುಡಾದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆಯೆಂದು ಹೇಳಲಾಗಿದೆ.
ಸ್ಥಳಕ್ಕೆ ಉಳ್ಳಾಲ ಪೊಲೀಸರು ಮತ್ತು ಸೋಕೊ (ಸೀನ್ ಆಫ್ ಕ್ರೈಂ ಆಫೀಸರ್ಸ್) ತಂಡವು ಭೇಟಿ ನೀಡಿದ್ದು ಬುರುಡೆ, ಎಲುಬುಗಳು ಮತ್ತು ಇತರ ಅವಶೇಷಗಳನ್ನ ಸಂಸ್ಕರಿಸಿ ಪರಿಶೀಲನೆಗೆ ಕಳಿಸಲಾಗಿದೆ. ದೇಹವು ಸಂಪೂರ್ಣ ಕೊಳೆತು ಹೋಗಿದ್ದು ಎಲುಬು ಬುರುಡೆಯ ಅವಶೇಷಗಳು ಮಾತ್ರ ಉಳಿದಿದ್ದು ಅನೇಕ ತಿಂಗಳ ಹಿಂದೆ ಘಟನೆ ನಡೆದಿರುವ ಸಾಧ್ಯತೆಯಿದೆ.
ಅಕ್ಷಯ ಫಾರ್ಮ್ ಸುತ್ತಲೂ ಆವರಣ ಗೋಡೆಯಿದ್ದು ಇದರೊಳಗೆ ಘಟನೆ ಹೇಗೆ ನಡೆಯಿತೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಅನೇಕ ಮರದ ಮಿಲ್ಲುಗಳಿದ್ದು, ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹೊರ ರಾಜ್ಯದ ವಲಸೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಫ್ಯಾಕ್ಟರಿಗಳಿಂದ ಬರುವ ರಾಸಾಯನಿಕ ದುರ್ವಾಸನೆಯ ಮಧ್ಯೆ ಶವ ಕೊಳೆತ ವಾಸನೆ ಯಾರಿಗೂ ತಿಳಿದು ಬಂದಿಲ್ಲವೆಂದು ಸ್ಥಳೀಯರು ಹೇಳಿದ್ದಾರೆ.