ಅನಧಿಕೃತ ಹಂದಿ ಸಾಕಣಾ ಕೇಂದ್ರದ ತ್ಯಾಜ್ಯನೀರು ಚರಂಡಿಗೆ: ಆರೋಗ್ಯಾಧಿಕಾರಿಯಿಂದ ಪರಿಶೀಲನೆ
Monday, November 3, 2025
ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮದ ಎರ್ಕುಲ ಎಂಬಲ್ಲಿ ನಡೆಯುತ್ತಿದೆಯೆನ್ನಲಾದ ಅಕ್ರಮ ಹಂದಿ ಸಾಕಾಣಿ ಕೇಂದ್ರದ ತ್ಯಾಜ್ಯ ನೀರನ್ನು ಪಕ್ಕದ ತೋಡಿಗೆ ಹರಿಯ ಬಿಡುತ್ತಿರುವುದರಿಂದ ಪರಿಸರವಿಡೀ ದುರ್ನಾತ ಬೀರುತ್ತಿರುವ ದೂರಿನ ಹಿನ್ನಲೆಯಲ್ಲಿ ಬಂಟ್ವಾಳ ಆರೋಗ್ಯಾಧಿಕಾರಿಗಳ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಆರೋಗ್ಯಾಧಿಕಾರಿ ಆಶೋಕ್ ರೈ ಮತ್ತವರ ಸಿಬ್ಬಂದಿಗಳು ಭೇಟಿ ನೀಡಿದ ವೇಳೆ ಹಂದಿ ಸಾಕಾಣಿ ಕೇಂದ್ರದಲ್ಲಿ ಅಶುಚಿತ್ವ, ರಕ್ಷಣಾ ಕವಚವಿಲ್ಲದೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದದು, ಕೇಂದ್ರದಿಂದ ತ್ಯಾಜ್ಯ ನೀರು ತೆರೆದ ಚರಂಡಿಯಲ್ಲಿ ಶೇಖರಣೆಯಾಗಿರುವುದು ಪತ್ತೆಯಾಗಿದೆ. ಅಲ್ಲದೆ ಹಂದಿ ಸಾಕಣಿಕ ಕೇಂದ್ರ ಪರವಾನಿಗೆಯನ್ನು ಪಡೆಯದಿರುವುದು ಕಂಡುಬಂದಿದೆ.
ಕೇಂದ್ರದ ತ್ಯಾಜ್ಯ ನೀರು ತೆರೆದ ಚರಂಡಿಗೆ ಹೋಗದಂತೆ ಟ್ಯಾಂಕ್ ನಿರ್ಮಾಣ ಮಾಡಬೇಕು, ಸಿಬ್ಬಂದಿಗಳಿಗೆ ರಕ್ಷಣಾ ಕವಚ ನೀಡಬೇಕು ಹಾಗೂ ಅದಷ್ಟು ಶೀಘ್ರ ಸಂಬಂಧಪಟ್ಟ ಪಂಚಾಯತ್ ನಿಂದ ಪರವಾನಿಗೆ ಪಡೆಯುವಂತೆಯು ಆರೋಗ್ಯಾಧಿಕಾರಿಗಳು ಕೇಂದ್ರದ ಮಾಲಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆಂದು ತಿಳಿದು ಬಂದಿದೆ.
ಅಮ್ಟಾಡಿ ಗ್ರಾಮದ ಎರ್ಕುಲ ಎಂಬಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹೊರಗಿನ ಖಾಸಗಿ ವ್ಯಕ್ತಿಯೋರ್ವರು ಪರವಾನಿಗೆ ಪಡೆಯದೆ ಹಂದಿ ಸಾಕಾಣೆ ಕೇಂದ್ರವನ್ನು ಕಾರ್ಯಾಚರಿಸುತ್ತಿದ್ದು, ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನಲೆಯಲ್ಲಿ ಅಲ್ಲಿನ ತ್ಯಾಜ್ಯದ ನೀರನ್ನು ಪಕ್ಕದ ತೆರೆದ ಚರಂಡಿಗೆ ಹರಿಯಬಿಡುವುದರಿಂದ ಪರಿಸರವಿಡೀ ದುರ್ನಾತ ಬೀರಿ ಉತ್ತಿರುವುದಲ್ಲದೆ ಕೆಲವರ ಅನಾರೋಗ್ಯದಲ್ಲಿಯು ಪರಿಣಾಮ ಉಂಟಾಗಿದ್ದು, ಈ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ಆರೋಗ್ಯ ಇಲಾಖೆಗೆ ದೂರು ನೀಡಿದ್ದರು.

