ಕಾಲಭೈರವ ಪೂಜಿಸುತ್ತಿದ್ದ ತುಳುವೇಶ್ವರಿ ಸಾನಿಧ್ಯ: ಪುರಾತತ್ವ ಇಲಾಖೆಯ ಅಸಡ್ಡೆ

ಕಾಲಭೈರವ ಪೂಜಿಸುತ್ತಿದ್ದ ತುಳುವೇಶ್ವರಿ ಸಾನಿಧ್ಯ: ಪುರಾತತ್ವ ಇಲಾಖೆಯ ಅಸಡ್ಡೆ


ಪಡುಬಿದ್ರಿ-ಕಾರ್ಕಳ ರಸ್ತೆಯ ಕರ್ನಾಟಕ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪತ್ತೆಯಾದ ಶಿಲಾ ಸಂಕೀರ್ಣವು ತುಳುನಾಡಿನ ಶೈವ-ಶಕ್ತ ಪರಂಪರೆಯ ಅಪೂರ್ವ ಇತಿಹಾಸವನ್ನು ಬೆಳಕಿಗೆ ತಂದಿದೆ. ಈ ಪ್ರದೇಶದಲ್ಲಿ ಪ್ರಾಚೀನ ಕಾಲದಲ್ಲಿ ಕಾಲಭೈರವ-ತುಳುವೇಶ್ವರಿ ಆರಾಧನೆ ನಡೆದಿದ್ದುದಕ್ಕೆ ಸ್ಪಷ್ಟ ಗುರುತುಗಳು ಕಾಣಿಸಿಕೊಂಡಿವೆ.


ರಸ್ತೆಯ ಪಕ್ಕದ ಶಿಲಾ ಬಂಡೆಗಳ ನಡುವೆ ಇರುವ ನೈಸರ್ಗಿಕ ಒಳ ಆವರಣದಲ್ಲಿರುವ ಕಾಲಭೈರವನ ಕೆತ್ತನೆಯುಳ್ಳ ಬಂಡೆ ಹಾಗೂ ಮುನಿಗಳಿಂದ ಆರಾಧನೆಗೊಂಡಿರಬಹುದಾದ ಅತ್ಯಂತ ಸಣ್ಣ ಶಕ್ತಿಲಿಂಗ ಪತ್ತೆಯಾಗಿದೆ. ಇಂದಿಗೂ ಕೂಡ ನಾಥ ಪರಂಪರೆಯ ಸಾಧಕರು ಈ ಸ್ಥಳಕ್ಕೆ ಬಂದು ಧ್ಯಾನ ಮಾಡುವುದಾಗಿ ಸ್ಥಳೀಯರು ತಿಳಿಸುತ್ತಾರೆ. ಕಾಲಭೈರವನು ತನ್ನ ತಾಯಿಯಾದ ಪರಾಶಕ್ತಿ ತುಳುವೇಶ್ವರಿಯನ್ನು ಆರಾಧಿಸುತ್ತಿದ್ದ ಸ್ಥಳವೆಂದು ಪ್ರತೀತಿಯಿದೆ.


ಈ ಮಹತ್ವದ ಮಾಹಿತಿಯನ್ನು ಕೃಷ್ಣಮೂರ್ತಿ ಭಟ್ ಪಾದೆಬೆಟ್ಟು ಅವರು ತುಳುವರ್ಲ್ಡ್ ಫೌಂಡೇಶನ್‌ಗೆ ಹಂಚಿಕೊಂಡಿದ್ದಾರೆ. ಇವರ ಪಾದೆಬೆಟ್ಟುವಿನಲ್ಲಿ ತಲೆಮಾರುಗಳಿಂದ ತುಳುವೇಶ್ವರಿ ದೇವಿಯ ಆರಾಧನೆ ನಡೆದು ಬಂದಿದ್ದು, ಹಲವು ಕಾರಣಗಳಿಂದ ಈ ಪೂಜಾ ಪದ್ಧತಿಗಳು ನಂತರ ಸಂಪೂರ್ಣ ನಿಂತಿವೆ. ಅವರು ಪಾರಂಪರಿಕವಾಗಿ ಆರಾಧಿಸುತ್ತಿದ್ದ ಕತ್ತಿ ಮತ್ತು ಗುರಾಣಿ ಹಿಡಿದಿರುವ ತುಳುವೇಶ್ವರಿ ವಿಗ್ರಹ ಈಗ ಉಡುಪಿಯ ಕಾಡುಬೆಟ್ಟು ಶನೀಶ್ವರ ಅಬ್ಬದ ದಾರಗ ಕ್ಷೇತ್ರದಲ್ಲಿ ಖಡ್ಗೇಶ್ವರಿ ಎಂಬ ಹೆಸರಿನಲ್ಲಿ ಪೂಜಿಸಲ್ಪಡುತ್ತಿದೆ.


ಪರಂಪರೆಯ ಪ್ರಕಾರ ಪಡುಬಿದ್ರಿ ಮತ್ತು ತುಳುನಾಡಿನ ಹಲವು ಭಾಗಗಳಲ್ಲಿ ತುಳುವೇಶ್ವರಿಗೆ ಪೂಜೆ, ಪಾರುಪತ್ಯ ಮತ್ತು ಪುನಸ್ಕಾರಗಳು ನಡೆಯುತ್ತಿದ್ದು, ಕಾಲಕ್ರಮೇಣ ಅವು ಖಡ್ಗೇಶ್ವರಿ, ಪದ್ಮಾವತಿ, ಆದಿ ಪರಾಶಕ್ತಿ, ವ್ಯಾಘ್ರಚಾಮುಂಡಿ, ಚಾಮುಂಡೇಶ್ವರಿ, ರಕ್ತೇಶ್ವರಿ, ದುರ್ಗಾಪರಮೇಶ್ವರಿ, ಅನ್ನಪೂರ್ಣೇಶ್ವರಿ ಮೊದಲಾದ ಹೆಸರುಗಳಿಂದ ರೂಪಾಂತರಗೊಂಡಿವೆ ಎಂದು ಅವರು ಅಭಿಪ್ರಾಯಪಟ್ಟರು. ಅಲ್ಲದೆ, ಕೊಕ್ಕರ್ಣೆ ಸಮೀಪವಿರುವ ನಂಚಾರು ಎಂಬಲ್ಲಿ ತುಳುವೇಶ್ವರಿ ಹೆಸರಿನಲ್ಲಿ ಇತ್ತೀಚಿನವರೆಗೂ ದೇವಸ್ಥಾನ ಇದ್ದದ್ದು, ಈಗ ಕೆಲವು ದಶಕಗಳಿಂದ ಅದನ್ನು ಖಡ್ಗೇಶ್ವರಿಯಾಗಿ ಮರುನಾಮಕರಣ ಮಾಡಿರುವ ದಾಖಲೆಗಳಿವೆ ಎಂದರು.


ಪಡುಬಿದ್ರಿಯನ್ನು ಹಳೆಯ ಕಾಲದಲ್ಲಿ ‘ಮಧ್ಯ’ ಎಂದು ಕರೆಯಲಾಗುತ್ತಿತ್ತು. ಇದೇ ಪ್ರದೇಶದಲ್ಲಿ ಗೇರುಸೊಪ್ಪೆಯ ಚನ್ನಬೈರವಿ ದೇವಿ ಮತ್ತು ಪದ್ಮಲತಾಂಬಿಕಾ ದೇವಿ (ಪೊಟ್ಟಿ) ಅವರ ಸಮಾಧಿಗಳು ಕಂಡುಬರುತ್ತವೆ. ಈ ಇಬ್ಬರು ರಾಣಿಯರ ಹೆಸರಿನಿಂದ ಈ ಸ್ಥಳವನ್ನು ‘ಚೆನ್ನಪೊಟ್ಟಿ’ ಎಂದು ಕರೆಯಲಾಗುತ್ತದೆ. ಇವರ ಗುರುಗಳಾದ ಸುವೃತ ಮುನಿ ಅವರ ಸಮಾಧಿಯೂ ಪಡುಬಿದ್ರಿಯಲ್ಲೇ ಇದೆ. ಮಾತ್ರವಲ್ಲದೆ ಇದಕ್ಕೆ ಸಂಬಂಧಿಸಿದ ಬಸದಿಯು ಪಡುಬಿದ್ರೆಯಲ್ಲಿ ಇದೆ. ಈ ಸಂಬಂಧಿತ ಉಲ್ಲೇಖಗಳು ತಾಮ್ರಶಾಸನಗಳಲ್ಲಿ ದೊರಕಿರುವುದು ಗಮನಾರ್ಹ.


ಸ್ಥಳೀಯ ಮಾಹಿತಿ ಪ್ರಕಾರ, ಪಾಂಡುರಾಯ ಬ್ರಹ್ಮಸ್ಥಾನ (ಪಾಂಡ್ಯರು) ಎಂಬ ಈ ಪ್ರದೇಶದಲ್ಲಿ ಪ್ರಾಚೀನ ಕಾಲದಲ್ಲಿ ಆಲಡೆ ಇದ್ದದ್ದು, ಹಾಗೆಯೇ ತುಳುನಾಡ ಕಳರಿ ಅಭ್ಯಾಸ ಕೇಂದ್ರಗಳು ಕಾರ್ಯನಿರ್ವಹಿಸಿದ್ದವು ಎಂಬ ಸಾಕ್ಷ್ಯಗಳಿವೆ. ಕೊಂಕಣ ರೈಲ್ವೆ ಮಾರ್ಗದ ಪಕ್ಕದಲ್ಲಿಯೇ ಈ ಪುರಾತನ ಕುರುಹುಗಳು ಇಂದಿಗೂ ಮೂಕ ಸಾಕ್ಷಿಯಾಗಿ ನಿಂತಿವೆ. ಮಾತ್ರವಲ್ಲದೆ ಬಸ್ರೂರು ತುಳುವೇಶ್ವರ ಸನ್ನಿಧಿಗೆ ಸಂಬಂಧಪಟ್ಟ ಅತ್ಯಂತ ಆಪ್ತ ಸಂಪರ್ಕ ಕೊಂಡಿಗಳು ಈ ಪ್ರದೇಶದಿಂದ ಲಭಿಸಲು ಸಾಧ್ಯತೆಯಿದೆ.


ಆದರೆ ತುಳುನಾಡಿನ ಈ ಎಲ್ಲಾ ಐತಿಹ್ಯಗಳು ಸಂಪೂರ್ಣ ನಶಿಸುತ್ತಿರುವ ಸಂದರ್ಭದಲ್ಲಿ ಪುರಾತತ್ವ ಇಲಾಖೆಯು ಇವುಗಳ ಬಗ್ಗೆ ಅಸಡ್ಡೆ ತೋರಿಸಿರುವುದು ತುಂಬಾ ಖೇದಕರ ಸಂಗತಿ. ಈ ಬಗ್ಗೆ ಸ್ಥಳೀಯ ಆಡಳಿತ ಇಲಾಖೆಗಳು ತಕ್ಷಣ ಗಮನಹರಿಸಬೇಕಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article