250ಕ್ಕೂ ಹೆಚ್ಚು ಅಕ್ರಮಸಕ್ರಮ ಅರ್ಜಿಗಳು ವಿಲೇವಾರಿಗೆ ಬಾಕಿ: ಅರಣ್ಯ ಇಲಾಖೆಯ ಸಮಸ್ಯೆ

250ಕ್ಕೂ ಹೆಚ್ಚು ಅಕ್ರಮಸಕ್ರಮ ಅರ್ಜಿಗಳು ವಿಲೇವಾರಿಗೆ ಬಾಕಿ: ಅರಣ್ಯ ಇಲಾಖೆಯ ಸಮಸ್ಯೆ

ಕಾರ್ಕಳ: ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಹೆಬ್ರಿ ಕಾರ್ಕಳ ಇದರ ಸಾಮಾಜಿಕ ಹೊಣೆಗಾರಿಕೆ ಹಿನ್ನಲೆಯಲ್ಲಿ ಹೆಬ್ರಿ ತಾಲ್ಲೂಕಿನ ಹೆಬ್ರಿ ಮತ್ತು ನಾಡ್ಪಾಲು ಗ್ರಾಮದ ಅಕ್ರಮ ಸಾಗುವಳಿದಾರರಿಗೆ ತಮ್ಮ ಜಮೀನುಗಳ ಪಟ್ಟಾ ಹಕ್ಕುಪತ್ರ ಪಡೆಯಲು ಕಾನೂನು ಸಮಸ್ಯೆಯಾಗಿದ್ದು, ಹೆಬ್ರಿ ಮತ್ತು ನಾಡ್ಪಾಲು ಗ್ರಾಮದ ಜಂಟಿ ಸರ್ವೆಯನ್ನು ನಡೆಸಿ ಹಕ್ಕುಪತ್ರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು, ಹೆಬ್ರಿ ತಹಶೀಲ್ಧಾರ್ ಮತ್ತು ಅರಣ್ಯ ಇಲಾಖೆಗೆ ನಿಯೋಗದೊಂದಿಗೆ ತೆರಳಿ ಮನವಿ ಸಲ್ಲಿಸಲಾಗುತ್ತದೆ ಎಂದು ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದರು.

ನಾಡ್ಪಾಲು ಗ್ರಾಮದಲ್ಲಿ 150 ಮತ್ತು ಹೆಬ್ರಿ ಗ್ರಾಮದ 100 ಕ್ಕಿಂತ ಹೆಚ್ಚಿನ ಅಕ್ರಮಸಕ್ರಮದಲ್ಲಿ ಸಲ್ಲಿಸಿದ ಅರ್ಜಿ ನಮೂನೆ 50,53 ಮತ್ತು 57ರ ಫಲಾನುಭವಿಗಳಿಗೆ ಅರಣ್ಯಮತ್ತು ಕಂದಾಯ ಇಲಾಖೆಯ ಭೂಮಿಯನ್ನು ಜಂಟಿ ಸರ್ವೆ ನಡೆಸಿ ಪಟ್ಟಾ ಪತ್ರವನ್ನು ದೊರಕುವಂತೆ ಆದೇಶ ನೀಡುವಂತೆ ನೀರೆ ಕೃಷ್ಣ ಶೆಟ್ಟಿ ಮನವಿ ಮಾಡಿದ್ದಾರೆ.

ಪರಭಾದಿತ ಅರಣ್ಯ ಪ್ರದೇಶವಿದ್ದಲ್ಲಿ, ಅದಕ್ಕೆ ಹೊಂದಿಕೊಂಡಿರುವ ಸರ್ವೆ ನಂಬ್ರಗಳಲ್ಲಿ ಗೊಂದಲಗಳಿದ್ದರೆ ಕಂದಾಯ ಇಲಾಖೆಯಿಂದ ಪ್ರಸ್ತಾವನೆಯನ್ನು ನಿಯಮನುಸಾರ ಮುಂದಿನ ಕ್ರಮಕ್ಕಾಗಿ ಅರಣ್ಯ ಇಲಾಖೆಗೆ ಕಳುಹಿಸುವಂತೆ ರಾಜ್ಯದ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಈಗಾಗಲೇ ನಿರ್ದೇಶನ ನೀಡಿದ್ದಾರೆ ಎಂದು ನೀರೆ ಕೃಷ್ಣ ಶೆಟ್ಟಿಯವರು ತಿಳಿಸಿದರು.

ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮದ ಸರ್ವೆ ನಂಬ್ರ 126ರಲ್ಲಿ 28205 ಎಕರೆ, ಹೆಬ್ರಿ ಗ್ರಾಮದ ಸರ್ವೆ ನಂಬ್ರ 210ರಲ್ಲಿ 2238 ಎಕರೆ ಸೇರಿ ಒಟ್ಟು 30343 ಎಕರೆ ವಿಸ್ತೀರ್ಣವಿದೆ. ಆದರೆ ಹೆಬ್ರಿ ವಲಯದ ಅರಣ್ಯ ದಾಖಲೆಗಳ ಪ್ರಕಾರ 26653 ಎಕರೆ ಮಾತ್ರ ಅರಣ್ಯ ಪ್ರದೇಶವಾಗಿದ್ದು ಉಳಿಕೆಯ 1550 ಎಕರೆಗೂ ಹೆಚ್ಚಿನ ಕಂದಾಯ ಅನಾಧೀನ ಭೂಮಿಗಳು 2 ಸರ್ವೆ ನಂಬರ್‌ಗಳಲ್ಲಿ ಅಡಕವಾಗಿದೆ.

ಹೆಬ್ರಿ ತಾಲ್ಲೂಕಿನ ಹೆಬ್ರಿ ಮತ್ತು ನಾಡ್ಪಾಲು ಗ್ರಾಮದ ಸರ್ವೆ ನಂಬರ್‌ಗಳ ಜಮೀನುಗಳನ್ನು ಜಂಟಿ ಸರ್ವೆ ನಡೆಸಿದರೆ ಅರಣ್ಯ ಇಲಾಖೆಯ ತಾಂತ್ರಿಕ ಸಮಸ್ಯೆಗಳಿಂದ 50-60 ವರ್ಷಗಳಿಂದ ಸಾಗುವಾಳಿ ಮಾಡಿಕೊಂಡು ತಮ್ಮ ಜಾಗದ ಹಕ್ಕುಪತ್ರಕ್ಕಾಗಿ ಎದುರು ನೋಡುತ್ತಿರುವ ಮನೆಮಂದಿಗೆ ನ್ಯಾಯ ದೊರೆಯುವ ಮೂಲಕ ಬಡ ಕೃಷಿಕರಿಗೆ ಶೀಘ್ರವಾಗಿ ಅಕ್ರಮಸಕ್ರಮ ಕಾಯ್ದೆಯಂತೆ ಪಟ್ಟಾ ಪತ್ರ ನೀಡಲು ಅವಕಾಶವಿದೆ. ಕೂಡಲೇ ಕ್ರಮ ಕೈಗೊಳ್ಳುವಂತೆ ನೀರೆ ಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article