‘ಕನ್ನಡದ ಮನಸ್ಸುಗಳನ್ಬು ಒಟ್ಟುಗೂಡಿಸಿರುವುದು ಸಂತಸದ ಕೆಲಸ’: ಪ್ರೊ.ಬಿ.ಎ.ವಿವೇಕ್ ರೈ

‘ಕನ್ನಡದ ಮನಸ್ಸುಗಳನ್ಬು ಒಟ್ಟುಗೂಡಿಸಿರುವುದು ಸಂತಸದ ಕೆಲಸ’: ಪ್ರೊ.ಬಿ.ಎ.ವಿವೇಕ್ ರೈ


ಕೊಣಾಜೆ: 1968 ರಲ್ಲಿ ಮೊಳಕೆಯೊಡೆದ ಕನ್ನಡದ ಬೀಜ ಎಸ್ ವಿಪಿ ಕನ್ನಡದ ಅಧ್ಯಯನ ಸಂಸ್ಥೆಯಾಗಿ ರೂಪುಗೊಂಡು ಹೆಮ್ಮರವಾಗಿ ಬೆಳೆಯುವುದರೊಂದಿಗೆ ಕನ್ನಡವನ್ನು ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಏಳು ತಲೆಮಾರುಗಳ ವಿದ್ಯಾರ್ಥಿಗಳು ಈ ಗಿಳಿವಿಂಡು ಸಮಾವೇಶದ ಮೂಲಕ ಕನ್ನಡದ ಮನಸ್ಸುಗಳನ್ಬು ಒಟ್ಟುಗೂಡಿಸಿರುವುದು ಸಂತಸ ತಂದಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ್ ರೈ ಅವರು ಹೇಳಿದರು.

ಅವರು ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ರವಿವಾರ ನಡೆದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಅಧ್ಯಾಪಕ, ಸಿಬ್ಬಂದಿಗಳ ಒಕ್ಕೂಟ ಗಿಳಿವಿಂಡು(ರಿ) ಇದರ ನಾಲ್ಕನೇ ಮಹಾ ಸಮಾವೇಶವನ್ನು ಅವರು ಉದ್ಘಾಟಿಸಿ ಅವರು ಮಾತನಾಡಿದರು. 

ಕನ್ನಡವನ್ನು ಪುಸ್ತಕ ಹಾಗೂ ತಂತ್ರಜ್ಞಾನದಲ್ಲಿ ಸಮಾನವಾಗಿ ಬಳಸಬೇಕಿದೆ. ತಂತ್ರಜ್ಞಾನ ಯಾವುದೂ ಶಾಶ್ವತವಲ್ಲ.ನಾವು ಅದರ ಗುಲಾಮರಾಗಬಾರದು. ನಮ್ಮ ತಿಳುವಳಿಕೆಯನ್ನು ಬಿಟ್ಟುಕೊಟ್ಟು ಕೃತಕ ಬುದ್ಧಿಮತ್ತೆಗೆ ದಾಸರಾಗದಿರೋಣ. ಕನ್ನಡವನ್ನು ಇಟ್ಟುಕೊಂಡೇ ಎಲ್ಲಾ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಚಾಕಚಕ್ಯತೆ ನಮ್ಮಲಿರಬೇಕು ಎಂದರು.

ಉಳ್ಳವರು ಶಿವಾಲಯ ಮಾಡುವರಯ್ಯ ಎಂದು ಅಂದು ಬಸವಣ್ಣ ಹೇಳಿದ್ದರು. ಆದರೆ ಪ್ರಸ್ತುತ ಉಳ್ಳವರು ಆಂಗ್ಲ ಶಾಲೆಯ ಮಾಡುವರಯ್ಯ ಎಂಬಂತಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಯಾಗಿ ರೂಪುಗೊಳ್ಳುತ್ತಿದೆ. ಸಂವಹನಕ್ಕೆ ಬೇಕಾದಷ್ಟು ಮಾತ್ರ ಆಂಗ್ಲ ಇರಬೇಕು. ಕನ್ನಡವನ್ಬು ಪ್ರೀತಿಸಿ ಪ್ರೋತ್ಸಾಹಿಸಿ ಬೆಳೆಸುವ ಜವಬ್ಧಾರಿ ನಮ್ಮದಾಗಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಮಾತನಾಡಿ ಮಂಗಳೂರು ವಿವಿಯ ಸ್ನಾತಕೋತ್ತರ ವಿಭಾಗಗಳು ಒಂದು ಚಿಂತನೆಗೆ ಕಟ್ಟುಬೀಳದೆ ವಿವಿಧ ವಿಷಯಗಳಿಗೆ ತೆರೆದುಕೊಂಡು ಬೆಳೆಯಬೇಕು ಎಂದು ಹೇಳಿದರು. 

ಮಂಗಳೂರು ವಿವಿಯ ಕನ್ನಡ ವಿಭಾಗದಲ್ಲಿ ಕರ್ತವ್ಯ ಸಲ್ಲಿಸಿದ ಪ್ರಾಧ್ಯಾಪಕರುಗಳಾದ ಪ್ರೊ ಬಿ.ಎ ವಿವೇಕ ರೈ, ಪ್ರೊ.ಕೆ ಚಿನ್ನಪ್ಪ ಗೌಡ, ಪ್ರೊಅಭಯಕುಮಾರ್, ಪ್ರೊ.ಶಿವರಾಮ ಶೆಟ್ಟಿ, ಪ್ರೊ.ಸೋಮಣ್ಣ, ಡಾ.ನಾಗಪ್ಪ ಗೌಡ, ಡಾ. ಧನಂಜಯ ಕುಂಬ್ಳೆ ಇವರನ್ನು ಸನ್ಮಾನಿಸಲಾಯಿತು. 

ಗಿಳಿವಿಂಡುವಿನ ಅಧ್ಯಕ್ಷರಾದ ಪ್ರೊ.ಶಿವರಾಮ ಶೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ನಾಗಪ್ಪ ಗೌಡ ಅವರು ವಂದಿಸಿದರು. ಡಾ.ಯಶುಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಡಾ.ಸಬಿತಾ ಬನ್ನಾಡಿ ಅವರ ಉಪನ್ಯಾಸ ಕಾರ್ಯಕ್ರಮ ನಡೆಯಿತು ಮತ್ತು ಗಿಳಿವಿಂಡು ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article