ಶ್ರೀರಾಮ ಕೋ ಅಪರೇಟಿವ್ ಸೊಸೈಟಿ: ಅವ್ಯವಹಾರ ಆರೋಪ
ಮಂಗಳೂರು: ಬೆಳ್ತಂಗಡಿಯ ಶ್ರೀರಾಮ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ 15 ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಿಐಡಿ, ಎಸ್‌ಐಟಿ ಅಥವಾ ಇತರ ಯಾವುದೇ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ನಡೆಸಬೇಕು ಒಂದು ಸೊಸೈಟಿಯ ಸಂತ್ರಸ್ತ ನಿರ್ದೇಶಕರ ಸಮಿತಿ ಒತ್ತಾಯಿಸಿದೆ.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಸಮಿತಿ ಸದಸ್ಯ ವಿಶ್ವನಾಥ್ ಬಿ., ಸಂಸ್ಥೆಯಲ್ಲಾದ ಅವ್ಯವಹಾರದ ಬಗ್ಗೆ ಬಯಲಿಗೆಳೆದರೂ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಮೌನ ವಹಿಸಿದ್ದಾರೆ. ಹಾಗಾಗಿ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಉಸ್ತುವಾರಿ ಸಚಿವರನ್ನು ತನಿಖೆ ನಡೆಸುವಂತೆ ಒತ್ತಾಯಿಸುತ್ತಿರುವುದಾಗಿ ಹೇಳಿದರು.
ನಿರ್ದೇಶಕರನೇಕರು ತಮ್ಮ ಜೀವಮಾನದ ದುಡಿಮೆಯ ಲಕ್ಷಗಟ್ಟಲೆ ಹಣವನ್ನು ಸೊಸೈಟಿಯಲ್ಲಿ ಠೇವಣಿ ಇರಿಸಿದ್ದು, ಇದೀಗ ಹಣ ಹಿಂಪಡೆಯಲಾಗದೆ ಕುಟುಂಬಗಳೇ ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ. ಅವ್ಯವಹಾರವನ್ನು ಬಯಲಿಗೆಳೆದ ನಿರ್ದೇಶಕರನ್ನೇ ಅಪರಾಧಿಗಳ್ನಾಗಿ ಬಿಂಬಿಸಲಾಗುತ್ತಿದೆ. ಸಂಸ್ಥೆಯ ಸದಸ್ಯರ ಸಹಕಾರ ಸಂಘಗಳ ಉಪ ನಿಬಂಧಕರು, ಗ್ರಾಹಕರ ವ್ಯಾಜ್ಯಗಳ ಆಯೋಗದ ಎದುರು ನಿರಂತರ ದಾವೆಗಳನ್ನು ಹೂಡುತ್ತಿದ್ದು, ತಾವು ನಿರಪರಾಽಗಳು ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗದೆ ಪ್ರತಿದಿನ ಕೋರ್ಟು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಸೊಸೈಟಿಯಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ನಯನ ಶಿವಪ್ರಸಾದ್, ಸದಾನಂದ, ಪ್ರಮೋದ್ ಆರ್. ನಾಯಕ್, ರತ್ನಾಕರ ಉಪಸ್ಥಿತರಿದ್ದರು.