ಕೊಲ್ಲೂರು ಮೂಕಾಂಬಿಕಾ ದೇವಾಲಯ ಹೆಸರಿನಲ್ಲಿ ನಕಲಿ ವೆಬ್ ಸೈಟ್ ರಚಿಸಿ ಮೋಸ: ಪ್ರಕರಣ ದಾಖಲು
ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ರಚಿಸಿ ದೇವಳದ ಕೊಠಡಿಗಳನ್ನು ಕಾಯ್ದಿರಿಸುವ ಹೆಸರಿನಲ್ಲಿ ವಂಚಿಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧಿಕೃತ ವೆಬ್‌ಸೈಟ್ http://karnatakatemplesaccommodatio.com ಬದಲಿಗೆ ಅಪರಿಚಿತರು ಅಕ್ರಮ ಲಾಭದ ಉದ್ದೇಶದಿಂದ karnataka temple accommodation ಎಂಬ ಅನಧಿಕೃತ ನಕಲಿ ವೆಬ್‌ಸೈಟ್‌ನ್ನು ರಚಿಸಿದ್ದು ಈ ನಕಲಿ ವೆಬ್‌ಸೈಟ್ ಮೂಲಕ ಹಲವಾರು ಜನರಿಗೆ ಲಲಿತಾಂಬಿಕಾ ಅತಿಥಿ ಗೃಹದ ಕೊಠಡಿಯನ್ನು ಕಾಯ್ದಿರಿಸಿದ್ದಾರೆ. ಅವರಿಂದ ವಾಟ್ಸಾಪ್ ತಂತ್ರಾಂಶದಲ್ಲಿ ಪೋನ್ ಪೇ ಕ್ಯೂಆರ್ ಕೋಡ್‌ನ್ನು ನೀಡಿ ಹಣವನ್ನು ಪಡೆದು ನಕಲಿ ರಶೀದಿ ನೀಡಿ ವಂಚಿಸಿ ಹಣ ದೋಚುತ್ತಿರುವುದು ಕಂಡುಬಂದಿದೆ.
ದೇವಳದ ಭಕ್ತರಿಗೆ ದೇವಳದ ಕೊಠಡಿಗಳನ್ನು ಕಾಯ್ದಿರಿಸುವ ಬಗ್ಗೆ ವಂಚಿಸುತ್ತಿರುವ ಈ ನಕಲಿ ವೆಬ್‌ಸೈಟ್ ಜಾಲವನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತದ ಪ್ರಖ್ಯಾತ ದೇವಳಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮುಕಾಂಬಿಕಾ ದೇವಾಲಯದಲ್ಲಿ ಇದೇನೂ ಮೊದಲ ಹಗರಣವಲ್ಲ. ಈ ಹಿಂದೆ ವಿದೇಶಗಳಲ್ಲಿ ಶ್ರೀ ಮೂಕಾಂಬಿಕೆಯ ಹೆಸರಿನಲ್ಲಿ ಚಂಡಿಕಾ ಹೋಮ ನಡೆಸಲಾಗುತ್ತಿದೆ ಎಂಬ ಬಗ್ಗೆ ಒಂದು ಹಗರಣ ನಡೆದಿತ್ತು. ಆ ನಂತರ ಶ್ರೀ ಮೂಕಾಂಬಿಕಾ ದೇವಿಯ ಚಿನ್ನಾಭರಣಗಳನ್ನು ನಕಲಿ ಮಾಡಲಾಗಿದೆ ಎಂಬ ಇನ್ನೊಂದು ಹಗರಣ ವರದಿಯಾಗಿತ್ತು. ಆದರೆ, ಇವುಗಳ ತನಿಖೆಯ ಅಂತ್ಯ ಹೇಗಾಯಿತು ಎಂಬ ಬಗ್ಗೆ ದೇವಾಲದವರು ಸ್ಪಷ್ಟನೆ ಕೊಡುವ ಆಸಕ್ತಿ ಹೊಂದಿಲ್ಲ. ಇವುಗಳ ಸಾಲಿಗೆ ಇದೀಗ ನಕಲಿ ವೆಬ್ ಸೈಟ್ ರಚನೆಯ ಪ್ರಕರಣವೊಂದು ಹೊಸ ಸೇರ್ಪಡೆ.