ಮೂಡುಬಿದಿರೆ ಪುರಸಭಾಧಿವೇಶನ-ರಾಜಕಾಲುಮೆ ಅತಿಕ್ರಮಗೊಳಿಸಿ ಕಟ್ಟಡ ನಿಮಾ೯ಣ: ಪರವಾನಿಗೆ ನೀಡಲು ಉಪಾಧ್ಯಕ್ಷರ ಆಕ್ಷೇಪ
ಇನ್ನು ಮುಂದೆ ಪರವಾನಿಗೆ ನೀಡಬೇಕಾದರೆ ಅಲ್ಲಿನ ಮೂಲಭೂತ ಸೌಲಭ್ಯಗಳಿಗೆ ಪುರಸಭೆ ಮಾಡುವ ಖರ್ಚನ್ನು ಕೊಡುವುದಾದರೆ ಮಾತ್ರ ಪರವಾನಿಗೆ ನೀಡಿ ಎಂದು ಹಿರಿಯ ಸದಸ್ಯ ಪಿ.ಕೆ.ಥಾಮಸ್ ಅವರು ಸಲಹೆ ನೀಡಿದರು.
ಹೊಸ ಮಾರ್ಕೆಟ್ ಕಟ್ಟಡದಲ್ಲಿ ಅಂಗಡಿ ಕೋಣೆಗಳಿಗೆ ಗುತ್ತಿಗೆದಾರರು ಸಾಕಷ್ಟು ಹಣ ಪಡೆದಿದ್ದಾರೆಂಬ ಆರೋಪಗಳು ಕೇಳಿಬರುತ್ತಿದ್ದು ಗೊಂದಲ ನಿರ್ಮಾಣವಾಗಿದೆ ಎಂದು ಸದಸ್ಯ ಕೊರಗಪ್ಪ ಸಭೆಯ ಗಮನಕ್ಕೆ ತಂದರು. ಮಾರ್ಕೆಟ್ ಹೊಸ ಕಟ್ಟಡಕ್ಕೆ ಶಿಫ್ಟ್ ಆಗುವಾಗ ಮೂಲ ವ್ಯಾಪಾರಿಗಳಿಗೆ ತೊಂದರೆಯಾಗದಿರಲಿ ಎಂದು ಸದಸ್ಯ ಪ್ರಸಾದ್ ಕುಮಾರ್ ಅವರು ಸಲಹೆ ನೀಡಿದರು.
ಈ ಮಾಹಿತಿ ನೀಡಿದ ಮುಖ್ಯಾಧಿಕಾರಿ ಇಂದು ಎಂ.ಅವರು ‘ ಮಾರ್ಕೆಟ್ ಕಟ್ಟಡ ಕಾಮಗಾರಿ ಮುಂದುವರಿಕೆಗೆ ಪೂರಕವಾದ ಅನುಮತಿ ಸಿಕ್ಕಿದೆ, ಮೂಲ ವ್ಯಾಪಾರಸ್ಥರ ಪಟ್ಟಿ ನಮ್ಮಲ್ಲಿದೆ,ಅವರ್ಯಾರಿಗೂ ಸಮಸ್ಯೆಯಾಗುವುದಿಲ್ಲ’ ನೂತನವಾಗಿ ನಿಮಾ೯ಣವಾಗಲಿರುವ ಅಂಗಡಿಗಳ ಹಂಚಿಕೆಯ ಕುರಿತು ಪುರಸಭೆ ಇದುವರೆಗೆ ಯಾರಿಗೂ ಯಾವುದೇ ಒಪ್ಪಿಗೆ ಪತ್ರ ಅಥವಾ ಭರವಸೆಯನ್ನು ನೀಡಿಲ್ಲ ಆದ್ದರಿಂದ ಹಣದ ವಿಚಾರ ಕಾನೂನುಬಾಹಿರವಾಗಿದೆ ಎಂದರು.
ಸಭೆಯ ಪುರಸಭಾ ಕಚೇರಿಯ ಎದುರಲ್ಲೇ ನಿರ್ಮಾಣವಾಗಿರುವ ಫಾರ್ಚೂನ್ ನೀತಿ ಹೈಟ್ಸ್ ಕಟ್ಟಡದವರು ಪುರಸಭೆಯ ಜಾಗದಲ್ಲಿ ಕಾಂಕ್ರೀಟ್ ರಸ್ತೆ ಮಾಡಿ ಗೇಟ್ ಹಾಕಿದ್ದಾರೆ, ಅವರಿಗೆ ಪರ್ಮಿಷನ್ ಕೊಟ್ಟವರ್ಯಾರು ? ಅವರು ಪುರಸಭೆಯಿಂದ ಅನುಮತಿ ಪಡೆದುಕೊಂಡಿದ್ದಾರಾ ? ದಾಖಲೆಯಲ್ಲಿ ಈಗಲೂ ಆ ಜಾಗ ಪುರಸಭೆಯದ್ದೆಂದೇ ಇದೆ, ಹಿಂದೆಲ್ಲಾ ಅಲ್ಲಿ ಟೆಂಪೊ ಪಾರ್ಕಿಂಗ್ ಇತ್ತು, ಪಕ್ಕದಲ್ಲೊಂದು ಬಾವಿ ಇತ್ತು, ನಾವೆಲ್ಲಾ ಅದೇ ಬಾವಿ ನೀರು ಉಪಯೋಗಿಸುತ್ತಿದ್ದೆವು, ಈಗ ಬಾವಿಯೇ ಇಲ್ಲದಂತ್ತಾಗಿದೆ ಎಂದು ಪುರಸಭಾ ಸದಸ್ಯ ರಾಜೇಶ್ ನಾಯ್ಕ್ ಎಂದು ಆರೋಪಿಸಿದಾಗ ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಕೊರಗಪ್ಪ ಅವರು ಪುರಸಭೆಯ ಅನುಮತಿ ಪಡೆಯದೆ ಪುರಸಭಾ ಜಾಗವನ್ನು ಅವರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಕಳೆದ ಸಭೆಯಲ್ಲಿ ಪ್ರಸ್ತಾಪವಾಗಿದ್ದ ಸ್ವರಾಜ್ಯ ಮೈದಾನದ ಬಳಿಯ ಕಟ್ಟಡದ ಬಗ್ಗೆ ಮತ್ತೆ ಪ್ರಸ್ತಾಪವಾಗಿ ಕೂಡಲೇ ಪರಿಶೀಲನೆಗೆ ಇಂಜಿನಿಯರ್ ಅವರನ್ನು ಕಳುಹಿಸಿಕೊಡಲು ನಿರ್ಧರಿಸಲಾಯಿತು.
ಕರಿಂಜೆ ಘನತ್ಯಾಜ್ಯ ಘಟಕದಲ್ಲಿ ಕೆಲವೊಂದು ಯಂತ್ರೋಪಕರಣಗಳು ಹಾಳಾಗಿವೆ. ಜೆಸಿಬಿ ಕೂಡ ಕಾರ್ಯಾಚರಿಸುತ್ತಿಲ್ಲ. ಪರಿಸರ ಅಭಿಯಂತಯವರು ಎಷ್ಟು ಬಾರಿ ಕರಿಂಜೆಗೆ ಹೋಗಿ ಪರಿಶೀಲನೆ ಮಾಡಿದ್ದೀರಿ..? ನೀವು ಕಚೇರಿ ಕೆಲಸಕ್ಕೆ ಮಾತ್ರ ಸೀಮಿತವಾಗದೆ ಹೊರಗಡೆ ಬಂದು ಅಲ್ಲಿನ ಸಮಸ್ಯೆಗಳ ಕುರಿತು ಗಮನಹರಿಸಬೇಕೆಂದು ಉಪಾಧ್ಯಕ್ಷ ನಾಗರಾಜ ಪೂಜಾರಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಕಮ್ಯುನಿಟಿ ಮೊಬಿಲೈಸರ್‌ಗಳು ಫೀಲ್ಡ್ ಕೆಲಸಕ್ಕೆ ಹೆಚ್ಚಿನ ಸಮಯವನ್ನು ವಿನೋಗಿಸುವಂತೆ ಸೂಚಿಸಲಾಯಿತು.
ಸದಸ್ಯರಾದ ಇಕ್ಬಾಲ್ ಕರೀಮ್, ಸುರೇಶ್ ಕೋಟ್ಯಾನ್, ಪುರಂದರ ದೇವಾಡಿಗ, ಸುಜಾತ, ಶ್ವೇತ,ಮಮತಾ ಆನಂದ್,ಜೊಸ್ಸಿ ಮಿನೇಜಸ್, ಶಕುಂತಲಾ ಹರೀಶ್, ನವೀನ್ ಶೆಟ್ಟಿ, ಸೌಮ್ಯ ಶೆಟ್ಟಿ, ರೂಪಾ ಸಂತೋಷ್,ಹಿಮಾಯತ್, ನಾಮನಿರ್ದೇಶಿತ ಸದಸ್ಯರಾದ ಕ್ಲಾರಿಯೋ ಸುಶ್ಮಿತ್ ಡಿಸೋಜ, ಲತೀಫ್, ಸತೀಶ್ ಕೋಟ್ಯಾನ್, ವರುಣ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.


