ಮಳಯಾಳಂ ಹಾವಳಿ: ಡಿ.3ನೇ ವಾರ ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಬಂದ್

ಮಳಯಾಳಂ ಹಾವಳಿ: ಡಿ.3ನೇ ವಾರ ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಬಂದ್


ಮಂಗಳೂರು: ಕರ್ನಾಟಕದ ಭಾಗವಾಗಿರುವ ಕಾಸರಗೋಡಿನಲ್ಲಿ ಮಲಯಾಳೀಕರಣದ ವ್ಯವಸ್ಥಿತ ಕಾರ್ಯತಂತ್ರ ನಡೆಯುತ್ತಿದ್ದು, ಅದರ ವಿರುದ್ಧ ಡಿಸೆಂಬರ್ 3ನೇ ವಾರದಲ್ಲಿ ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಮಂಗಳೂರು ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 2ನೇ ವಾರದಲ್ಲಿ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ ನಡೆಯಲಿದೆ. ಅಲ್ಲಿ ಸೂಕ್ತ ನಿರ್ಣಯಗಳನ್ನು ಕೈಗೊಂಡು ಮೂರನೇ ವಾರದಲ್ಲಿ ಮಂಗಳೂರಿನಲ್ಲಿ ರಾ.ಹೆದ್ದಾರಿ ಬಂದ್ ನಡೆಸುವ ಮೂಲಕ ಸತ್ಯಾಗ್ರಹ ನಡೆಸಲಾಗುವುದು ಎಂದರು. 

ಕಾಸರಗೋಡನ್ನು ರಾಜ್ಯಕ್ಕೆ ಸೇರಿಸುವ ನಿಟ್ಟಿನಲ್ಲಿ ಕಯ್ಯಾರ ಕಿಂಞಣ್ಣ ರೈ, ಗೋವಿಂದ ಪೈ ಬಳಿಕ ಹೋರಾಟದ ಮುಖಂಡತ್ವ ಬದಿಗೆ ಸರಿದಿದೆ. ವಿಧಾನಸಭೆ, ವಿಧಾನ ಪರಿಷತ್ ಅಥವಾ ಸಂಸತ್ತಿನಲ್ಲಿ ಈ ಬಗ್ಗೆ ಮಾತನಾಡುತ್ತಿಲ್ಲ. ಈ ನಡುವೆ ಕಾಸರಗೋಡನ್ನು ಮಲಯಾಳೀಕರಣಗೊಳಿಸುವ ಮೂಲಕ ಕನ್ನಡ ಸಂಸ್ಕೃತಿ ನಾಶ ಆಗುತ್ತಿದೆ. ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಕನ್ನಡ ಶಾಲೆಗಳಲ್ಲಿ ಮಲಯಾಳಿ ಉಪಾಧ್ಯಾಯರನ್ನು ನೇಮಕ ಮಾಡಲಾಗುತ್ತಿದೆ. ಇದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಇಂದು ಪರ ಭಾಷೆಗಳ ದಾಳಿ ಹೆಚ್ಚಾಗುತ್ತಿದೆ. ಮಂಗಳೂರಿನ ಪರಿಸ್ಥಿತಿ ನೋಡುವಾಗ ಮುಂದೆ ಏನಾಗುವುದೋ ಎಂಬ ಆತಂಕ ಕಾಡುತ್ತಿದೆ. ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಆಗದಿದ್ದರೆ ಕನ್ನಡಿಗರು ಅಲ್ಪಸಂಖ್ಯಾತರಾಗುವ ಕಾಲ ಬರಲಿದೆ. ಐಟಿ-ಬಿಟಿಗಳವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಇಲ್ಲಿನ ಜಮೀನು, ವಿದ್ಯುತ್ ನೀರು ಪಡೆವ ಐಟಿಬಿಟಿಗಳವರು ಉದ್ಯೋಗಕ್ಕೆ ಕನ್ನಡಿಗರನ್ನು ಕಡೆಗಣಿಸುತ್ತಿದ್ದಾರೆ ಎಂದರು.

ಬಳ್ಳಾರಿಯಲ್ಲಿ ಜಿಂದಾಲ್ ಕಂಪೆನಿಗೆ ಸುಮಾರು 11,000 ಎಕರೆ ಭೂಮಿಯನ್ನು ಎಕರೆಗೆ 1.5 ಲಕ್ಷ ರೂ. ದರದಲ್ಲಿ ನೀಡಲಾಗಿದೆ. ಆದರೆ ಅಲ್ಲಿ ಎಷ್ಟು ಕನ್ನಡಿಗರನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ಕೈಗಾರಿಕೆ ಇಲಾಖೆಯವರು ನೋಡಿಲ್ಲ. ಸರೋಜಿನಿ ಮಹಿಷಿ ವರದಿ ಮೂಲೆಗುಂಪಾಗಿದೆ. ಉದ್ಯೋಗ ಮಸೂದೆಯನ್ನು ಶಾಸನ ಸಭೆಯಲ್ಲಿ ಮಂಡನೆಯಾಗಬೇಕಾಗಿತ್ತು. ಆದರೆ ಆ ಕಾರ್ಯ ಆಗಿಲ್ಲ. ಈ ನಿಟ್ಟಿನಲ್ಲಿ ಕಾಸರಗೋಡು ಸಮ್ಮೇಳನದ ಬಳಿಕ ಕಾರವಾರ, ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಕನ್ನಡ ಪರ ಹೋರಾಟವನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಕಾರ್ಯದರ್ಶಿ ಕುಶಲ ಕುಮಾರ ಕೆ., ಕರ್ನಾಟ ಸಮಿತಿ ಕಾಸರಗೋಡು ಅಧ್ಯಕ್ಷ ಕೆ.ಎಂ. ಬಳ್ಳಕ್ಕುರಾಯ, ಕಾಸರಗೋಡು ಕನ್ನಡ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಕೆ. ಗುರುಪ್ರಸಾದ್ ಕೋಟೆಕಣಿ, ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು, ಕನ್ನಡ ಜಾಗೃತಿ ಸಮಿತಿಯ ಕಾರ್ಯದರ್ಶಿ ಶ್ರೀಕಾಂತ ಕಾಸರಗೋಡು, ಕೇರಳ ಪ್ರಾಂತ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ್ ಎ. ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article