ನಾಳೆ 72ನೇ ಅಖಿಲ ಭಾರತ ಸಹಕಾರ ಸಪ್ತಾಹ

ನಾಳೆ 72ನೇ ಅಖಿಲ ಭಾರತ ಸಹಕಾರ ಸಪ್ತಾಹ


ಮಂಗಳೂರು: ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನ.16 ರಂದು 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಅದ್ದೂರಿಯಾಗಿ ನಡೆಯಲಿದೆ. ಇದಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು ಹಾಗೂ ಮಂಗಳೂರಿನ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ನಿ.) ಇದರ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.


ಸಮ್ಮೇಳನ ನಡೆಯುವ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ ಅಂತಿಮ ಸಿದ್ಧತೆಯನ್ನು ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು. 


72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ‘ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು’ ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿ  ಆಚರಿಸಲಾಗುತ್ತಿದೆ. ಅದೇ ರೀತಿಯಾಗಿ 7 ದಿನಗಳ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಬಗ್ಗೆಯೂ ಚಿಂತನ-ಮಂಥನ ನಡೆಯುತ್ತಿದೆ. ಸಹಕಾರ ಸಪ್ತಾಹದ  ಆಚರಣೆಯ ಸಂದರ್ಭದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ಬಲಪಡಿಸುವುದು ಎಂಬ ವಿಷಯದ ಬಗ್ಗೆ ಕಾರ್ಯಕ್ರಮ ನಡೆಯಲಿದೆ. ಸಹಕಾರ ವ್ಯವಸ್ಥೆಯ ಮೂಲಕ ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುವ ಪ್ರಯತ್ನ ಸಹಕಾರ ಸಪ್ತಾಹ ಆಚರಣೆಯಲ್ಲಿ ನಡೆಯುತ್ತಿದೆ. ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು  ಸಹಕಾರ ಚಳುವಳಿಯ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹವನ್ನು ನೀಡುತ್ತಿದ್ದು, ಈ ಸಹಕಾರ ಸಪ್ತಾಹ ವೈವಿಧ್ಯಮಯ ಚಟುವಟಿಕೆಯ ಮೂಲಕ ಗುರುತಿಸಿಕೊಂಡಿದೆ ಎಂದರು.


ಈ ಬಾರಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ, ಬೆಂಗಳೂರು, ದಕ್ಷಿಣ  ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ದಕ್ಷಿಣ ಕನ್ನಡ ಸಹಕಾರಿ  ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ (ರಿ.) ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೃಷಿ  ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳು, ಸೌಹಾರ್ಧ ಸಹಕಾರ ಸಂಘಗಳು ಹಾಗೂ ಎಲ್ಲಾ ವಿಧದ ಸಹಕಾರ ಸಂಘಗಳು ಮತ್ತು ಸಹಕಾರ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.


ಬೃಹತ್ ವಸ್ತು ಪ್ರದರ್ಶನ:

ಸಹಕಾರ ಸಪ್ತಾಹಕ್ಕೆ ವಸ್ತು ಪ್ರದರ್ಶನ ಮತ್ತು ಬೃಹತ್ ಸಹಕಾರ ಮೆರವಣಿಗೆ ಮೆರುಗು ನೀಡಲಿದೆ. ಇದಕ್ಕಾಗಿ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡಲಾಗಿದ್ದು,  ಮುಂಭಾಗದಲ್ಲಿ ಸಹಕಾರಿ ಬಂಧುಗಳು ಆಸೀನರಾಗಲು ವಿಶಾಲವಾದ ಚಪ್ಪರವನ್ನು ಹಾಕಲಾಗಿದೆ. ಪ್ರಥಮ ಹಂತದಲ್ಲಿ ಗಣ್ಯರಿಗೆ ಹಾಗೂ ಮಾಧ್ಯಮಗಳಿಗೆ ವ್ಯವಸ್ಥೆಯನ್ನು  ಮಾಡಲಾಗಿದೆ. ಅಲ್ಲದೆ ಭದ್ರತೆಯ ದೃಷ್ಟಿಯಿಂದಾಗಿ ನಾನಾ ಹಂತಗಳಲ್ಲಿ ಆಸನವನ್ನು ವಿಭಜಿಸಲಾಗಿದೆ. ಸಭಾಂಗಣವಿಡೀ ತಂಪಾಗಿರಿಸಲು ಬೃಹತ್ ಗಾತ್ರದ ಫ್ಯಾನ್‌ಗಳನ್ನು  ಜೋಡಿಸಲಾಗಿದೆ ಎಂದರು.


ಆಕರ್ಷಕ ಮೆರವಣಿಗೆ:

ಸಹಕಾರ ಸಪ್ತಾಹವನ್ನು ಅತ್ಯಂತ ಆಕರ್ಷಕ ರೀತಿಯಲ್ಲಿ ನಡೆಸುವ ಉದ್ದೇಶದಿಂದ ನವೆಂಬರ್ 16ರಂದು ಬೆಳಗ್ಗೆ 9 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಿಂದ ಕರುನಾಡಿನ ವೈವಿಧ್ಯತೆಯನ್ನೊಳಗೊಂಡ ಸಹಕಾರ ಮೆರವಣಿಗೆ ನಡೆಯಲಿದೆ. ಈ ಸಹಕಾರ ಮೆರವಣಿಗೆಯಲ್ಲಿ ಸಹಕಾರ ಬಂಧುಗಳು ಹಾಗೂ  ಸ್ವ-ಸಹಾಯ ಗುಂಪಿನ ಸದಸ್ಯರು ಸೇರಿ ಸುಮಾರು 15,000 ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಈ ಸಹಕಾರ ಮೆರವಣಿಗೆಯಲ್ಲಿ ಸುಮಾರು 50ಕ್ಕೂ ಹೆಚ್ಚಿನ ಟ್ಯಾಬ್ಲೋಗಳು ಭಾಗವಹಿಸಲಿದೆ ಎಂದರು.

ಸಹಕಾರ ರಥ, ಘಟೋತ್ಕಜ, ಚೆಂಡೆ, ಕೊಂಬು, ಸಹಕಾರಿ ಬಣ್ಣದ ಕೊಡೆಗಳು, ಭುವನೇಶ್ವರಿ ದೇವಿಯ ಸ್ತಬ್ಧಚಿತ್ರ, ಪುರುಷರ ಹಾಗೂ ಮಹಿಳೆಯರ ಡೊಳ್ಳು ಕುಣಿತ,  ಮೊಳಹಳ್ಳಿ ಶಿವರಾವ್ ಸ್ತಬ್ಧಚಿತ್ರ, ಮಹಿಳೆಯರ ವೀರಗಾಸೆ, ಹೈನುಗಾರಿಕೆಯ ಸ್ತಬ್ಧಚಿತ್ರ, ಮೀನುಗಾರಿಕೆಯ ಸ್ತಬ್ಧಚಿತ್ರ, ಹೊನ್ನಾವರ ಬ್ಯಾಂಡ್, ಕೆ.ಎಂ.ಎಫ್.-ನಂದಿನಿ ಆನ್ ವ್ಹೀಲ್ ಸ್ತಬ್ಧಚಿತ್ರ, ಸುಗ್ಗಿ ಕುಣಿತ, ತುಳುನಾಡು ವೈಭವ ಸ್ತಬ್ಧಚಿತ್ರ, ನವೋದಯ ಪ್ರಚಾರ ವಾಹನ, ಪುರವಂತಿಗೆ, ಗ್ರಾಮೀಣ ಬ್ಯಾಂಕಿಂಗ್ ಚಟುವಟಿಕೆಯ  ಸ್ತಬ್ಧಚಿತ್ರ, ಚೆಂಡೆ ವಾಹನ, ಸೋಮನ ಕುಣಿತ, ಪಟ್ಟದ ಕುಣಿತ, ಶಿವನ ಮೂರ್ತಿಯ ಸ್ತಬ್ಧಚಿತ್ರ, ನವೋದಯ ಗುಂಪಿನ ಸಭೆ ನಡೆಸುವ ಸ್ತಬ್ಧಚಿತ್ರ, ಗೊರವರ ಕುಣಿತ,  ಪ್ರಾಥಮಿಕ ಪತ್ತಿನ ಸಂಘದ ಸ್ತಬ್ಧಚಿತ್ರ, ಕೃಷಿ ಚಟುವಟಿಕೆಯ ಸ್ತಬ್ಧಚಿತ್ರ, ಉಳುಮೆ ಮಾಡುವ ರೈತನ ಸ್ತಬ್ಧಚಿತ್ರ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಮೊಬೈಲ್ ಬ್ಯಾಂಕ್ ವಾಹ ನ ಸೇರಿದಂತೆ 50 ಕ್ಕೂ ಅಧಿಕ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದರು.

ಸಹಕಾರ ಮಾಣಿಕ್ಯ ಪ್ರಶಸ್ತಿ:

ಈಗಾಗಲೇ ಸಹಕಾರ ಮಾಣಿಕ್ಯ ಪ್ರಶಸ್ತಿಯನ್ನು 3 ಸಹಕಾರ ಸಂಸ್ಥೆಗಳಿಗೆ ಘೋಷಿಸಲಾಗಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ  ತಲಾ 1 ಉತ್ತಮ ಕೃಷಿಪತ್ತಿನ ಸಹಕಾರಿ ಸಂಘಗಳನ್ನು ಹಾಗೂ 1 ಪತ್ತಿನ ಸಹಕಾರಿ ಸಂಘವನ್ನು 2025ನೇ ಸಾಲಿನ ಸಹಕಾರ ಮಾಣಿಕ್ಯ ಪ್ರಶಸ್ತಿಗೆ ಆಯ್ಕೆ  ಮಾಡಲಾಗಿದೆ. ಪ್ರಶಸ್ತಿಯ ಜೊತೆಗೆ 5 ಗ್ರಾಂ ಚಿನ್ನದ ಪದಕ, ರೂ.10,000 ನಗದು ಹಾಗೂ ಪಾರಿತೋಷಕವನ್ನು ನೀಡಲಾಗುವುದು. ಸಾಮಾನ್ಯ ವಿಭಾಗದಲ್ಲಿ ಕೃಷಿ ಪತ್ತಿ ನ ಸಹಕಾರ ಸಂಘಗಳ ಪೈಕಿ ಉಭಯ ಜಿಲ್ಲೆಗಳಲ್ಲಿ ಒಂದರಂತೆ ಹಾಗೂ ಹೈನುಗಾರಿಕೆ ಕ್ರೆಡಿಟ್ ಸೊಸೈಟಿ, ಮೀನುಗಾರಿಕಾ ಸಹಕಾರಿ ಸಂಘ, ಸೌಹಾರ್ಧ ಸಹಕಾರಿ ಸಂಘ ಹಾಗೂ ಮಹಿಳಾ ಸಹಕಾರಿ ಸಂಘಕ್ಕೆ ಉಭಯ ಜಿಲ್ಲೆಗಳಿಂದ 1 ಹಾಗೂ ವಜ್ರ ಮಹೋತ್ಸವ ಮತ್ತು ಸುವರ್ಣ ಮಹೋತ್ಸವ ಪೂರೈಸಿದ ಸಂಘಗಳನ್ನು ಗೌರ ವಿಸಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರುಗಳಾದ ದೇವಿಪ್ರಸಾದ್ ಶೆಟ್ಟಿ, ಸದಾಶಿವ ಉಳ್ಳಾಲ, ರವೀಂದ್ರ ಕಾಂಬ್ಲಿ, ರವೀಂದ್ರ ಹೆಗ್ಡೆ, ಹೆಚ್.ಎಂ. ರಮೇಶ್, ರಘು, ಜಯರಾಜ್ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಭಾಸ್ಕರ್ ಎಸ್ ಕೋಟ್ಯಾನ್, ಗೋಪಾಲಕೃಷ್ಣ ಭಟ್, ಶಶಿಕುಮಾರ್ ರೈ ಬಾಲ್ಯೋಟ್ಟು ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article