ಹ್ಯಾಕರ್ಸ್ ಆಫ್ ಮಂಗಳೂರಿನ HMNOV25 ಎಐ ಮೀಟ್‌ಗೆ ಪೂರ್ವ ಕಾರ್ಯಕ್ರಮವಾಗಿ ಮಾನ್ಯತೆ: ಸಂಸದ ಕ್ಯಾ.ಚೌಟ
ಮಂಗಳೂರು: ಹ್ಯಾಕರ್ಸ್ ಆಫ್ ಮಂಗಳೂರು ಆಯೋಜಿಸುವ ನವೆಂಬರ್ ತಿಂಗಳ HMNOV25 ಕಾರ್ಯಕ್ರಮವು ಭಾರತ ಸರ್ಕಾರ ಮುಂದಿನ ವರ್ಷದ ಫೆಬ್ರವರಿಯಲ್ಲಿ ಆಯೋಜಿಸಲಿರುವ ಅಂತಾರಾಷ್ಟ್ರೀಯ ಮಟ್ಟದ ಇಂಡಿಯಾ- ಎಐ ಇಂಪ್ಯಾಕ್ಟ್ ಸಮ್ಮೇಳನಕ್ಕೆ ಅಧಿಕೃತ ಮಾನ್ಯತೆ ಪಡೆದ ಪೂರ್ವ ಶೃಂಗಸಭೆ ಕಾರ್ಯಕ್ರಮವಾಗಿ ಗುರುತಿಸಲ್ಪಟ್ಟಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಎಐ ಇಂಡಿಯಾ ಮಿಷನ್ ಜತೆಗೆ ಕ್ಯಾ. ಚೌಟ ಅವರು ನಿರಂತರ ಸಮನ್ವಯತೆ ಸಾಧಿಸಿದ ಪರಿಣಾಮ ಹ್ಯಾಕರ್ಸ್ ಆಫ್ ಮಂಗಳೂರಿನ ಈ ಎಐ ಮೀಟ್‌ಗೆ ಈ ರೀತಿ ಮಹತ್ವದ ಮಾನ್ಯತೆ ಲಭ್ಯವಾಗಿದೆ. ಈ ಮಾನ್ಯತೆಯು ಮಂಗಳೂರನ್ನು ಭಾರತದ ಸಿಲಿಕಾನ್ ಬೀಚ್ ಹಾಗೂ ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಐ ತಂತ್ರಜ್ಞಾನ ಆವಿಷ್ಕಾರಗಳ ಹಬ್ ಆಗಿ ಬೆಳೆಸುವುದಕ್ಕೆ ಹೆಚ್ಚಿನ ಅನುಕೂಲ, ಉತ್ತೇಜನ ನೀಡಲಿದೆ. ಆ ಮೂಲಕ, ಮಂಗಳೂರಿನಲ್ಲಿಯೂ ಎಐ ಆವಿಷ್ಕಾರಕ್ಕೆ ಹೊಸ ಅವಕಾಶ ತೆರೆದಿಡಲಿದೆ. ಜತೆಗೆ ಮಂಗಳೂರು ನಗರವನ್ನು ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದ ಎಐ ತಂತ್ರಜ್ಞಾನದ ಸಾಲಿನಲ್ಲಿ ಗುರುತಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಕ್ಯಾ. ಚೌಟ ಅವರು ಅಭಿಪ್ರಾಯಪಟ್ಟಿದ್ದಾರೆ.
ನ.29ರಂದು ಮಂಗಳೂರು ನಗರದಲ್ಲಿ ಈ HMNOV25 ಈವೆಂಟ್ ಆಯೋಜಿಸಲಾಗಿದ್ದು, ಎಐ ತಂತ್ರಜ್ಞಾನ ಕ್ಷೇತ್ರವನ್ನು ಉತ್ತೇಜಿಸುವಲ್ಲಿ ಮಹತ್ವದ ಕಾರ್ಯಕ್ರಮವಾಗಿದೆ. ಈ ಈವೆಂಟ್‌ನಲ್ಲಿ ಡೀಪ್-ಟೆಕ್ ವಿಚಾರ ಸಂಕಿರಣ, ಪ್ರಾಯೋಗಿಕ ಕಾರ್ಯಾಗಾರ, ಹೊಸ ಆವಿಷ್ಕಾರಗಳ ಪ್ರದರ್ಶನ, ಎಐ ವೃತ್ತಿಪರರು-ಪರಿಣತರ ಜತೆ ಸಂವಾದ, ಎಐ ಡೆವಲ್ಪರ್‌ಗಳ ಮೀಟ್ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ.
ಈ ಹಿನ್ನಲೆಯಲ್ಲಿ ಇಂಡಿಯಾ-ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಪೂರಕವಾಗಿ ನಡೆಯುವ ಈ ಎಐ ಮೀಟ್‌ಗೆ ಕೇಂದ್ರ ಸರ್ಕಾರದ ಮಾನ್ಯತೆ ಲಭಿಸಿರುವುದು ಮಂಗಳೂರನ್ನು ಎಐ ಕ್ಷೇತ್ರದಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸುವುದಕ್ಕೆ ದೊಡ್ಡ ಮೈಲುಗಲ್ಲು ಆಗಲಿದೆ. ಹೀಗಾಗಿ, ಜಾಗತಿಕ ಎಐ ಸಮ್ಮೇಳನದ ಜತೆಗೆ ಮಂಗಳೂರನ್ನು ಜೋಡಿಸುವಲ್ಲಿ ಈ ಮಾನ್ಯತೆಯು ನಮ್ಮ ಕರಾವಳಿ ಭಾಗದಲ್ಲಿ ಎಐ ತಂತ್ರಜ್ಞಾನ ಅಭಿವೃದ್ಧಿಗೆ ಪರಿಸರ ಸ್ನೇಹಿ ವಾತಾವರಣ ಸೃಷ್ಟಿಸಲಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.