ಉಡುಪಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ
Friday, November 28, 2025
ಉಡುಪಿ: ಪರ‍್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಶುಕ್ರವಾರ ನಡೆದ ಲಕ್ಷ ಕಂಠ ಗೀತ ಪಾರಾಯಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಆದಿವುಡುಪಿ ಹೆಲಿಪ್ಯಾಡ್‌ನಿಂದ ಕೃಷ್ಣಮಠಕ್ಕೆ ಆಗಮಿಸುವ ಮಾರ್ಗ ಮಧ್ಯದಲ್ಲಿ ಬನ್ನಂಜೆ ಡಾ.ವಿಎಸ್.ಆಚಾರ‍್ಯ ಬಸ್ ನಿಲ್ದಾಣ ಬಳಿಯ ನಾರಾಯಣಗುರು ವೃತ್ತದಿಂದ ತೊಡಗಿ ಕಲ್ಸಂಕ ಜಂಕ್ಷನ್ ವರೆಗೆ ಮೂರು ಕಡೆಗಳಲ್ಲಿ ರೋಡ್ ಶೋ ನಡೆಸಿದರು. ನೆಚ್ಚಿನ ನಾಯಕ ನರೇಂದ್ರ ಮೋದಿ ಅವರನ್ನು ಕಾಣಲು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದಿತ್ತು. ಮೋದಿ ಪರ ಘೋಷಣೆ ಕೂಗುತ್ತಾ ‘ಮೋದಿ...ಮೋದಿ’ ಎಂಬ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ನಡುನಡುವೆ ಜೈಶ್ರೀರಾಮ್ ಘೋಷಣೆ ಕೇಳಿಬಂತು.
ಅಭಿಮಾನಿಗಳು ಹಾಗೂ ಬಿಜೆಪಿ ಕಾರ‍್ಯಕರ್ತರ ಹರ್ಷೋದ್ಘಾರ ಗಮನಿಸಿದ ಪ್ರಧಾನಿ ಮೋದಿ ಕಾರಿನ ಮುಂಭಾಗದ ಬಾಗಿಲು ತೆರೆದು ಜನತೆಯತ್ತ ಕೈಬೀಸಿದರು. ರಸ್ತೆಯುದ್ದಕ್ಕೂ ನೆರೆದಿತ್ತ ಅಭಿಮಾನಿಗಳು ಮೋದಿಯತ್ತ ಹೂಮಳೆಗರೆದರು. ಅದೇ ವೇಳೆ ಮೋದಿಯವರೂ ಅಭಿಮಾನಿಗಳಿಗೆ ಹೂ ಎಸೆದಿರುವುದು ಅಭಿಮಾನಿಗಳ ಸಂತಸ ನೂರ್ಮಡಿ ವೃದ್ಧಿಸಿತು.
ಗೀತಾ ಲೇಖನಯಜ್ಷ ದೀಕ್ಷೆ ಪಡೆದ ಪ್ರಧಾನಿ:
ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ‍್ಯಾಯದ ಮಹತ್ವಾಕಾಂಕ್ಷಿ ಯೋಜನೆಯಾದ ಕೋಟಿ ಲೇಖನ ಯಜ್ಞ ದೀಕ್ಷೆಯನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಶ್ರೀಕೃಷ್ಣನ ಸಮ್ಮುಖದಲ್ಲಿ ಪಡೆದರು. ಗೀತೆ ಕೇವಲ ಗ್ರಂಥವಲ್ಲ, ಅದು ಜೀವನ ಮಾರ್ಗ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು. ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಇದ್ದರು.
